×
Ad

' ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವುದು ಸಿಬ್ಬಂದಿಯ ಜವಾಬ್ದಾರಿ '

Update: 2017-03-08 16:55 IST

ಮಂಗಳೂರು, ಮಾ.8: ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವುದು ಚಾಲಕ, ನಿರ್ವಾಹಕರ ಜವಾಬ್ದಾರಿಯಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪಾಯುಕ್ತ ಡಾ. ಸಂಜೀವ್ ಪಾಟೀಲ್ ತಿಳಿಸಿದರು.

ದ.ಕ. ಬಸ್ ಮಾಲಕರ ಸಂಘ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ 'ಸಿಟಿ ಬಸ್ ಚಾಲಕ-ನಿರ್ವಾಹಕರಿಗೆ ತರಬೇತಿ ಶಿಬಿರ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಮಾ.13ರಿಂದ ಎಲ್ಲ ವಾಹನಗಳ ಲೈಸೆನ್ಸ್ ತಪಾಸಣೆ ಮಾಡಲಾಗುವುದು. ಮೇನಲ್ಲಿ ಎಲ್ಲ ವಾಹನಗಳ ಅಂಕಿ-ಅಂಶ ಮಾಹಿತಿಯನ್ನು ಕಲೆ ಹಾಕಲಾಗುವುದು. ಸಿಗ್ನಲ್ ಜಂಪ್ ಮಾಡಿದರೆ ದಂಡ ವಿಧಿಸಲಾಗುವುದು. ಇದು ಪುನರಾವರ್ತನಗೊಂಡರೆ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ಫೋನ್-ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ಈಗಾಗಲೇ ಜಿಲ್ಲೆಯ ಸಾರ್ವಜನಿಕರಿಂದ ಸುಮಾರು 500ಕ್ಕೂ ಹೆಚ್ಚು ದೂರುಗಳು ಬಂದಿವೆ. ಇದರಲ್ಲಿ ಹೆಚ್ಚಾಗಿ ಟ್ರಾಫಿಕ್, ಬಸ್‌ಗಳ ಸಮಸ್ಯೆ ಬಗ್ಗೆ ದೂರುಗಳಿವೆ ಎಂದರು.

ಉಡುಪಿ ಮತ್ತು ಮಂಗಳೂರು ಮಧ್ಯೆ ಕಳೆದ 3 ತಿಂಗಳಲ್ಲಿ 110ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. 78 ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇದಕ್ಕೆ ಬೇಜವಾಬ್ದಾರಿತನ, ಮಿತಿಮೀರಿದ ವೇಗದ ಚಾಲನೆ, ಪೈಪೋಟಿಯಲ್ಲಿ ಚಾಲನೆ ಮಾಡುವುದು. ಚಾಲನೆ ವೇಳೆ ಚಾಲಕರು ಮೊಬೈಲ್ ಬಳಸುವುದು. ಬಸ್ ನಿಲ್ದಾಣದ ಮುಂಭಾಗದಲ್ಲಿ ಬಸ್ ನಿಲ್ಲಿಸದೆ ರಸ್ತೆಯ ಮಧ್ಯ ಭಾಗದಲ್ಲಿ ನಿಲ್ಲಿಸುವುದು ಇತ್ಯಾದಿ ಕಾರಣವಾಗಿದೆ. ಇದರಿಂದ ರಸ್ತೆ ಅಪಘಾತಗಳಾಗುತ್ತವೆ. ಈ ಬಗ್ಗೆ ಚಾಲಕರು ಎಚ್ಚರಿಕೆ ವಹಿಸಬೇಕು ಎಂದು ಡಾ. ಸಂಜೀವ್ ಪಾಟೀಲ್ ತಿಳಿಸಿದರು.

ರಸ್ತೆಯ ಸಿಗ್ನಲ್‌ಗಳನ್ನು ಜಂಪ್ ಮಾಡುವುದು, ಕರ್ಕಶವಾದ ಹಾರ್ನ್ ಹಾಕುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ರಸ್ತೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ 200 ಪ್ರಕರಣ ದಾಖಲಾಗಿವೆ. ಕಳೆದ ವರ್ಷಕ್ಕಿಂತ ಈ ಬಾರಿ ನಾಲ್ಕು ಪಟ್ಟು ತಪ್ಪುಗಳು ಹೆಚ್ಚಿವೆ ಎಂದು ಹೇಳಿದರು.

ಬಸ್‌ಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರಿಗೆ ಕಾಯ್ದಿರಿಸಲಾದ ಸೀಟಿನಲ್ಲಿ ಬೇರೆಯವರು ಕುಳಿತು ಪ್ರಯಾಣಿಸುತ್ತಿರುವ ಬಗ್ಗೆ ವಾರಕ್ಕೆ 2-3 ದೂರುಗಳು ಬರುತ್ತಿವೆ. ಕಂಡು ಕಾಣದ ಹಾಗೆ ಬಸ್ ನಿರ್ವಾಹಕರು ವರ್ತಿಸುತ್ತಿದ್ದಾರೆ. ನಿರ್ವಾಹಕರು ಜಾಗೃತರಾಗಬೇಕು. ನೀವು ಹೇಳಿದ ನಂತರವೂ ಕುಳಿತವರು ಏಳದಿದ್ದರೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ತಿಳಿಸಿದ್ದಲ್ಲಿ ಅಂತಹವರಿಗೆ 100 ರೂ. ದಂಡವನ್ನು ಹಾಲಾಗುವುದು ಎಂದು ತಿಳಿಸಿದರು.

ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ಮಾತನಾಡಿ, ಸಾರ್ವಜನಿಕರಿಂದ ಆರ್‌ಟಿಒ ಇಲಾಖೆಗೆ ನೂರಾರು ದೂರುಗಳು ಬರುತ್ತಿವೆ. ಒಂದೇ ಸ್ಟಾಪ್‌ನಲ್ಲಿ ಹಲವು ಬಾರು ಸೀಟಿಯನ್ನು ಊದುವುದು. ಇದ್ದಕ್ಕ್ಕಿದ್ದಂತೆ ಬ್ರೇಕ್ ಹಾಕುವುದು ಸೇರಿದಂತೆ ಮತ್ತಿತರ ಸಮಸ್ಯೆ ಕುರಿತು ದೂರುಗಳು ಕೇಳಿಬರುತ್ತಿವೆ. ಚಾಲಕ-ನಿರ್ವಾಹಕರು ಜಾಗರೂಕತೆ ವಹಿಸಬೇಕು. ಮಂಗಳೂರು ಸ್ಮಾರ್ಟ್ ಸಿಟಿಯಾಗುತ್ತಿದ್ದು, ಇಲ್ಲಿನ ಚಾಲಕ-ನಿರ್ವಾಹಕರೂ ಸ್ಮಾರ್ಟ್ ಆಗಬೇಕೆಂದು ಕರೆ ನೀಡಿದರು.

ಈಶ್ವರಿ ವಿಶ್ವವಿದ್ಯಾನಿಲಯದ ಬ್ರಹ್ಮಕುಮಾರಿ ವಿಶ್ವೇಶ್ವರಿ ಉಪನ್ಯಾಸ ನೀಡಿದರು. ಈ ಸಂದರ್ಭ ಎಸಿಪಿ ತಿಲಕಚಂದ್ರ, ರಾಜ್ಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ, ಉಪಾಧ್ಯಕ್ಷ ಬಿ.ಪಿ. ದಿವಾಕರ್, ಜಯರಾಜ್ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News