×
Ad

ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಚಿನ್ನಭರಣ ಕಳವು; ಇನ್ನೊಂದು ಕಳವಿಗೆ ಯತ್ನಿಸಿದ ಕಳ್ಳರಿಗೆ ಗಾಯ !?

Update: 2017-03-08 18:45 IST

ಬಂಟ್ವಾಳ, ಮಾ.8: ಕಿಟಕಿಯ ಸರಳು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಕಲ್ಲಡ್ಕ ಪೇಟೆಯಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಕೆ.ಪಿ.ನಿಝಾರ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ನಿಝಾರ್ ಹಾಗೂ ಅವರ ಪತ್ನಿ, ಮಗು ಈ ಮನೆಯಲ್ಲಿ ವಾಸವಿದ್ದು ಮಂಗಳವಾರ ಸಂಜೆ ನಿಝಾರ್‌ರವರ ಕುಟುಂಬ ಮೆಲ್ಕಾರ್‌ನಲ್ಲಿರುವ ಮಾವನ ಮನೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ಮನೆಗೆ ವಾಪಾಸ್ ಆದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಪಾಟಿನ ಬಾಗಿಲನ್ನು ಒಡೆದು ಜಾಲಾಡಿದ್ದು ಈ ಸಂದರ್ಭದಲ್ಲಿ ಕಪಾಟಿನಲ್ಲಿರಿಸಲಾಗಿದ್ದ 12 ಪವನ್ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪ ಹಾಗೂ ಅವರ ಸಿಬ್ಬಂದಿ, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಈ ಕೃತ್ಯದಲ್ಲಿ ಭಾಗಿಯಾಗಿರಬೇಕೆಂದು ಶಂಕಿಸಲಾಗಿದೆ.

 ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದೆ. ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು 2.25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಹಾಗೆಯೇ ಅಂದು ರಾತ್ರಿ ಕಲ್ಲಡ್ಕ ಮಸೀದಿ ಹಿಂಬದಿಯ ಇನ್ನೊಂದು ಮನೆಗೂ ಕಳ್ಳರು ನುಗ್ಗಿರುವ ಘಟನೆ ಕೂಡಾ ನಡೆದಿದೆ. ಮನೆಯ ಹಿಂಭಾಗಿಲನ್ನು ಒಡೆದು ಒಳ ನುಗ್ಗಿರುವ ಕಳ್ಳರು ಚಿನ್ನಾಭರಣಕ್ಕಾಗಿ ಕಪಾಟನ್ನು ಜಾಲಾಡಿದ್ದಾರೆ.

ಆದರೆ ಚಿನ್ನಾಭರಣ ಸಿಗದಿರುವುದರಿಂದ ಕಳ್ಳರು ಬರೀ ಕೈಯಲ್ಲಿ ಹಿಂತಿರುಗಿದ್ದಾರೆ. ಮನೆಯೊಳಗೆ ರಕ್ತದ ಕಲೆಗಳು ಪತ್ತೆಯಾಗಿದ್ದು ಬಾಗಿಲು ಒಡೆಯುವ ಸಂದರ್ಭದಲ್ಲಿ ಕಳ್ಳರ ಕೈಗೆ ಗಾಯವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಈ ಎರಡೂ ಕೃತ್ಯವನ್ನು ಒಂದೇ ತಂಡ ನಡೆಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ವೃತ್ತಿಪರ ಕಳ್ಳರ ತಂಡ ಈ ಕೃತ್ಯ ನಡೆಸಿರುವ ಗುಮಾನಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News