ಸ್ವಚ್ಛ ಭಾರತ ಅಭಿಯಾನದಲ್ಲಿ ರಾಜ್ಯಕ್ಕೆ 419ಕೋ.ರೂ. ಮಂಜೂರು: ಸಚಿವ ರಮೇಶ್ ಜಿಗಜಿಣಗಿ
ಉಡುಪಿ, ಮಾ.7: ಕರ್ನಾಟಕ ರಾಜ್ಯಕ್ಕೆ ಸ್ವಚ್ಛ ಭಾರತ ಅಭಿಯಾನ ಗ್ರಾಮೀಣ ಯೋಜನೆಯಡಿ 253.43ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೋರಿಕೆಯಂತೆ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿ 419.56ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ಸಚಿವ ರಮೇಶ್ ಸಿ.ಜಿಗ ಜಿಣಗಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಪರ್ಕಳ ಲಯನ್ಸ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ವಚ್ಛ ಶಕ್ತಿ ಸಪ್ತಾಹವನ್ನು ಉದ್ಘಾಟಿಸಿ, ಪ್ರೇರಣಾ ಪರಿಕಲ್ಪನೆಯ ಸಂಚಿಕೆ ಮತ್ತು ಗರ್ಭಿಣಿ ಮಹಿಳೆಯರ ಅಪೌಷ್ಠಿಕತೆ ನಿವಾರಣೆ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಈ ಯೋಜನೆಯನ್ನು ಎಲ್ಲ ರಾಜ್ಯಗಳು ಆದ್ಯತೆ ಮೇರೆಗೆ ಅನುಷ್ಠಾನ ಗೊಳಿಸಿ ಶೀಘ್ರವಾಗಿ ಬಯಲು ಶೌಚ ಮುಕ್ತ ರಾಜ್ಯಗಳನ್ನಾಗಿ ಘೋಷಿಸಬೇಕಾ ಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ನೀಡಿದೆ. ರಾಜ್ಯಗಳ ಪ್ರಗತಿ ವರದಿಯನ್ನು ಆಧರಿಸಿ ಬೇಡಿಕೆಗೆ ಅನುಗುಣವಾಗಿ ಅನುದಾನವನ್ನು ಹಂಚಿಕೆ ಮಾಡಲಾಗುವುದು ಎಂದರು.
ಸ್ವಚ್ಛ ಭಾರತ ಯೋಜನೆಯನ್ನು ಪ್ರಾರಂಭಿಸಿದ ದಿನದಿಂದ ಈವರೆಗೆ ದೇಶದಲ್ಲಿ 3.50 ಕೋಟಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದೇಶದ 101 ಜಿಲ್ಲೆಗಳನ್ನು ಮತ್ತು 1.67ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತಗಳನ್ನಾಗಿ ಘೋಷಿಸಲಾಗಿದೆ. ದೇಶದಲ್ಲಿ ಶೇ.61.27ರಷ್ಟು ಪ್ರಮಾಣ ದಲ್ಲಿ ಸಾರ್ವಜನಿಕರು ಶೌಚಾಲಯಗಳನ್ನು ಹೊಂದಿದ್ದಾರೆ. 10,500ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. 8853ಕೋಟಿ ರೂ. ಅನು ದಾನವನ್ನು ಎಲ್ಲ ರಾಜ್ಯ ಸರಕಾರಗಳು ಖರ್ಚು ಮಾಡಿವೆ. 2017-18ನೆ ಆರ್ಥಿಕ ವರ್ಷ ದಲ್ಲಿ ಸುಮಾರು 14ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರಗಳಿಗೆ ನೀಡಲು ಯೋಜಿಸಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ವಹಿಸಿದ್ದರು. ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸ್ವಚ್ಛತಾ ಮಿಷನ್ ರಾಜ್ಯ ಪ್ರತಿನಿಧಿ ಚೇತನ ಗಂಗಾ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಸುಧಾಕರ್ ಶೆಟ್ಟಿ, ಒಕ್ಕೂಟ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್, ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಲಯನ್ಸ್ ಕ್ಲಬ್‌ನ ರಾಧಾಕೃಷ್ಣ ಮೆಂಡನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ವಂದಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಉಡುಪಿಯ ಬೋರ್ಡ್ ಹೈಸ್ಕೂಲ್‌ನಿಂದ ಪುರಭವನದ ವರೆಗೆ ನಡೆದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚಾಲನೆ ನೀಡಿದರು.
6,829 ಬಯಲು ಮುಕ್ತ ಶೌಚ ಗ್ರಾಮ:
ಕರ್ನಾಟಕ ರಾಜ್ಯ ಉತ್ತಮ ಪ್ರಗತಿ ಸಾಧಿಸಿದ್ದು, 27623 ಗ್ರಾಮಗಳಲ್ಲಿ 6829(ಶೇ.24.92) ಗ್ರಾಮ, 28 ತಾಲೂಕು, ಉಡುಪಿ ಸೇರಿದಂತೆ ಐದು ಜಿಲ್ಲೆಗಳನ್ನು ಬಯಲು ಮುಕ್ತ ಶೌಚ ಜಿಲ್ಲೆಗಳನ್ನಾಗಿ ಘೋಷಿಸಲಾಗಿದೆ. ಶೇ.64 ರಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ಶೌಚಾಲಯ ಸೌಲಭ್ಯವನ್ನು ಕಲ್ಪಿಸ ಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 5,45,987 ವೈಯಕ್ತಿಕ ಶೌಚಾಲಯ ಗಳನ್ನು ಮತ್ತು 53 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಸಚಿವ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.