×
Ad

ಮಹಿಳೆಯರು ಅದರ್ಶದಲ್ಲಿ ಸಮಾಜಕ್ಕೆ ಮಾದರಿಯಾಗಬೇಕು: ಶಾಸಕಿ ಶಕುಂತಳಾ ಶೆಟ್ಟಿ

Update: 2017-03-08 21:13 IST

ಪುತ್ತೂರು, ಮಾ.8: ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂಬುದನ್ನು ಸಮಾಜಕ್ಕೆ ತೋರಿಸುವ ಕಾರ್ಯ ಇಂದು ಸಾಕಷ್ಟು ಕಂಡು ಬರುತ್ತಿದ್ದು, ತಮ್ಮ ಆದರ್ಶದ ಮೂಲಕ ಮಹಿಳೆಯರು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪುತ್ತೂರಿನ ಪುರಭವನದಲ್ಲಿ ಬುಧವಾರ ಕಾಲೇಜು ಶಿಕ್ಷಣ ಇಲಾಖೆ ಮತ್ತು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜ್‌ನ ಆಶ್ರಯದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣಿನ ಮಹತ್ವವನ್ನು ಸಾಕಷ್ಟು ವರ್ಷಗಳ ಹಿಂದೆಯೇ ಜಾನಪದ ಕವಿಗಳು ಸಾರಿದ್ದಾರೆ. ಆದರೆ ಸುಶಿಕ್ಷಿತರಾಗಿರುವ ನಮ್ಮ ನಡುವೆ ಮಹಿಳೆಯರ ಶೋಷಣೆ, ದೌರ್ಜನ್ಯ ನಡೆಯುತ್ತಿರುವುದು ದುರಂತವಾಗಿದೆ. ಪುರುಷ ಸಮಾಜ ಸುರಕ್ಷತೆಯ ಹೆಸರಿನಲ್ಲಿ ಮಹಿಳೆಯನ್ನು ಮನೆಯೊಳಗೆ ಬಂಧಿಸುವ ಕೆಲಸ ಮಾಡಿದೆ. ಆ ದಾಸ್ಯದ ಸಂಕೋಲೆಯಿಂದ ಪರಿಪೂರ್ಣವಾಗಿ ಮಹಿಳೆ ಹೊರಬರಲು ಇನ್ನೂ ಸಾಧ್ಯವಾಗಿಲ್ಲ. ಸಶಕ್ತ ಮಹಿಳಾ ಸಮಾಜ ನಿರ್ಮಾಣವಾದಾಗ ಮಹಿಳಾ ದಿನಾಚರಣೆಗೆ ಅರ್ಥ ಬರಲಿದೆ ಎಂದರು.

ಮಹಿಳೆಯಲ್ಲಿ ಧೈರ್ಯ ಕಡಿಮೆಯಾದಾಗ ಆಕೆಯ ಮೇಲೆ ದೌರ್ಜನ್ಯ ಹೆಚ್ಚಾಗುತ್ತದೆ. ಮಹಿಳೆಗೆ ಸ್ವಾತಂತ್ರ್ಯ ಬೇಕು. ಆದರೆ ಸ್ವಾತಂತ್ರ್ಯ ಬೇರೆ, ಸ್ವೇಚ್ಚಾಚಾರ ಬೇರೆ. ಪುರುಷನಿಗೆ ತಾನು ಸಮಾನಳಾಗಬೇಕು ಎಂಬ ಭರದಲ್ಲಿ ಹೆಣ್ಣು ಸ್ವೇಚ್ಚಾಚಾರದಿಂದ ವರ್ತಿಸಿದರೆ ನಂತರ ಅದರಿಂದ ಅಪಾಯ ಆಗೋದು ಹೆಣ್ಣಿಗೆ. ಸಮಾನತೆಯ ಭ್ರಮೆಯಲ್ಲಿ ಎಲ್ಲೆ ಮೀರಿ ವರ್ತಿಸದೆ ಅಂತರ ಇಟ್ಟುಕೊಳ್ಳಿ. ಕೆಲಸದ ಸಮಯದಲ್ಲಿ ಆತ್ಮವಿಶ್ವಾಸದಿಂದ ಕೆಲಸ ಮಾಡಿ. ಉಳಿದ ಸಮಯದಲ್ಲಿ ನಿಮ್ಮ ಸ್ಥಳ ಸೇರಿಕೊಳ್ಳಿ. ಸಮಾನತೆಯ ಹೆಸರಿನಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ತಿರುಗಾಡಿಕೊಂಡಿದ್ದರೆ, ಫ್ಯಾಶನ್ ಹೆಸರಿನಲ್ಲಿ ಏನೇನೋ ಚಟಗಳಿಗೆ ದಾಸರಾದರೆ ಅದರಿಂದ ಹೆಣ್ಣಿನ ಪ್ರತಿಷ್ಠೆಯೂ ಕುಸಿಯುತ್ತದೆ. ಆಕೆಯ ಮೇಲೆ ದೌರ್ಜನ್ಯ, ದಾಳಿ ಹೆಚ್ಚಾಗುತ್ತದೆ. ಯಾವುದೇ ಕ್ಷಣದಲ್ಲಿ ಮೈಮರೆತರೆ ಮತ್ತೆ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಬಹುದು ಎಂದು ಕಿವಿಮಾತು ಹೇಳಿದರು.

ಪುತ್ತೂರು ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ಜಿ. ಭಟ್, ಲಯನೆಸ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ರಾವ್ ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ಪುತ್ತೂರಿನ ಮೊದಲ ಮಹಿಳಾ ವೈದ್ಯೆ ಆಗಿದ್ದ ಡಾ.ಬಿ. ನಳಿನಿ ರೈ ಮತ್ತು ಪುತ್ತೂರಿನ ಮೊದಲ ಮಹಿಳಾ ಶಿಕ್ಷಕಿ ಆಗಿದ್ದ ಪ್ರೊ. ಕೊನ್ಸೆಪ್ಟಾ ಲೋಬೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಸಂಘಟಕ ಡಾ.ಕೃಷ್ಣಪ್ಪ ಮಡಿವಾಳ ಸ್ವಾಗತಿಸಿದರು. ಉಪನ್ಯಾಸಕಿಯರಾದ ಶ್ರೀದೇವಿ, ಪ್ರೀತಿಕಾ ಮತ್ತು ರೇಶ್ಮಾ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಡಾ. ಶ್ರೀಧರ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News