ಲಕ್ನೊ: ಶಂಕಿತ ಉಗ್ರನ ಹತ್ಯೆ

Update: 2017-03-08 17:34 GMT

ಲಕ್ನೊ, ಮಾ.8: ಲಕ್ನೊದ ಹೊರವಲಯ ದಲ್ಲಿರುವ ಠಾಕೂರಗಂಜ್‌ನಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ 12 ಗಂಟೆಗಳ ಬಳಿಕ ಗುರುವಾರ ನಸುಕಿನಲ್ಲಿ ಅಂತ್ಯಗೊಂಡಿದ್ದು, ಶಂಕಿತ ಭಯೋತ್ಪಾದಕನೋರ್ವ ಕೊಲ್ಲಲ್ಪಟಿದ್ದಾನೆ.ಹತ ಭಯೋತ್ಪಾದಕನನ್ನು ಕಾನ್ಪುರದ ನಿವಾಸಿ ಸೈಫುಲ್ಲಾ(23) ಎಂದು ಗುರುತಿಸಲಾಗಿದೆ.

ಯುವಕ ಅಡಗಿಕೊಂಡಿದ್ದ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ದ ಕಮಾಂಡೋಗಳು ಶಸ್ತ್ರಾಸ್ತ್ರಗಳೊಂದಿಗೆ ಸತ್ತುಬಿದ್ದಿದ್ದ ತರುಣನ ಶವವನ್ನು ಪತ್ತೆ ಹಚ್ಚಿದ್ದಾರೆ ಎಂದು ಎಡಿಜಿಪಿ ದಲ್ಜಿತ್ ಚೌಧರಿ ತಿಳಿಸಿದರು.
ಉಗ್ರರ ಜೊತೆ ನಂಟಿಲ್ಲ
ಹತ ಸೈಫುಲ್ಲಾ ಯಾವುದೇ ಭಯೋತ್ಪಾದಕ ಸಂಘಟನೆಯ ಜೊತೆಗೆ ನಂಟು ಹೊಂದಿದ್ದ ಎನ್ನುವುದಕ್ಕೆ ಯಾವುದೇ ಪುರಾವೆ ಇನ್ನೂ ಪೊಲಿಸರಿಗೆ ಲಭಿಸಿಲ್ಲ ಎಂದು ಚೌಧರಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಬಾಂಬ್ ತಯಾರಿಕೆ ಉಪಕರಣ, ಪಾಸ್‌ಪೋರ್ಟ್‌ಗಳು, ಐಡಿ ಕಾರ್ಡ್‌ಗಳು, ಎಂಟು ಪಿಸ್ತೂಲುಗಳು, ಟೈಮರ್‌ಗಳು, ವೈರ್‌ಗಳು ಮತ್ತು 600ಕ್ಕೂ ಅಧಿಕ ಸಜೀವ ಗುಂಡುಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ಮಂಗಳವಾರ ಬೆಳಗ್ಗೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಜಾಬ್ಡಿ ನಿಲ್ದಾಣದ ಬಳಿ ಭೋಪಾಲ-ಉಜ್ಜೈನ್ ರೈಲಿನಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಗಾಯಗೊಂಡಿದ್ದರು. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಈ ಸ್ಫೋಟದೊಂದಿಗೆ ನಂಟು ಹೊಂದಿದ್ದ ಶಂಕಿತ ಭಯೋತ್ಪಾದಕರ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಪೈಕಿ ಸೈಫುಲ್ಲಾ ಲಕ್ನೊದ ಹೊರವಲಯದ ಠಾಕೂರ್‌ಗಂಜ್‌ನ ಮನೆಯೊಂದರಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಪಡೆದಿದ್ದ ಕಮಾಂಡೋಗಳು ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದಲೇ ಮುತ್ತಿಗೆ ಹಾಕಿದ್ದರು. ಸತತ 12 ಗಂಟೆಗಳ ಕಾರ್ಯಾಚರಣೆಯ ಬಳಿಕ ಬುಧವಾರ ನಸುಕಿನಲ್ಲಿ ಸೈಪುಲ್ಲಾ ಕೊಲ್ಲಲ್ಪಟ್ಟಿದ್ದಾನೆ. ಆತನನ್ನು ಜೀವಂತವಾಗಿ ಸೆರೆ ಹಿಡಿಯುವ ಕಮಾಂಡೋಗಳ ಪ್ರಯತ್ನ ವಿಫಲಗೊಂಡಿತ್ತು. ದೇಶದ್ರೋಹಿಯ ಶವವನ್ನು ಸ್ವೀಕರಿಸುವುದಿಲ್ಲ: ತಂದೆ
ಲಕ್ನೋ, ಮಾ.8: ಲಕ್ನೋ ಬಳಿ ಮಂಗಳವಾರ ನಡೆದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟಿರುವ ಶಂಕಿತ ಭಯೋತ್ಪಾದಕ ಸೈಫುಲ್ಲಾನ ಶವವನ್ನು ಸ್ವೀಕರಿಸಲು ಆತನ ತಂದೆ,ಕಾನ್ಪುರ ನಿವಾಸಿ ಸರ್ತಾಜ್ ನಿರಾಕರಿಸಿದ್ದಾರೆ.

‘‘ದೇಶದ್ರೋಹಿಯೋರ್ವ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಭಾರತೀಯರು, ನಾವು ಇಲ್ಲಿಯೇ ಹುಟ್ಟಿದ್ದು, ನಮ್ಮ ಪೂರ್ವಜರೂ ಇಲ್ಲಿಯೇ ಹುಟ್ಟಿದ್ದರು. ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಅವನ ಶವವನ್ನು ಸ್ವೀಕರಿಸುವುದಿಲ್ಲ’’ ಎಂದು ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸರ್ತಾಜ್ ಸ್ಪಷ್ಟಪಡಿಸಿದರು. ಸೈಫುಲ್ಲಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನುವುದು ತನಗೆ ತಿಳಿದಿರಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News