ಐಸಿಸಿ ಮಹಿಳೆಯರ ವಿಶ್ವಕಪ್: ಭಾರತಕ್ಕೆ ಇಂಗ್ಲೆಂಡ್ ಮೊದಲ ಎದುರಾಳಿ
ಹೊಸದಿಲ್ಲಿ, ಮಾ.8: ಭಾರತದ ಮಹಿಳಾ ತಂಡ ಜೂ.24 ರಂದು ಡೆರ್ಬಿಯದ ಕ್ರಿಕೆಟ್ ಕೌಂಟಿ ಗ್ರೌಂಡ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸುವ ಮೂಲಕ ಐಸಿಸಿ ಮಹಿಳಾ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಈ ಪಂದ್ಯ ಟೂರ್ನಿಯ ಉದ್ಘಾಟನಾ ಪಂದ್ಯವಾಗಿದ್ದು, ಮೊದಲ ದಿನ ಭಾರತ-ಇಂಗ್ಲೆಂಡ್ ತಂಡಗಳಲ್ಲದೆ, ಮತ್ತೊಂದು ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಕ್ವಾಲಿಫೈಯರ್ ಶ್ರೀಲಂಕಾವನ್ನು ಎದುರಿಸಲಿದೆ.
ಡರ್ಬಿಯಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಆಡಲಿದೆ.ಇದರಲ್ಲಿ ಜು.2 ರಂದು ನಡೆಯಲಿರುವ ಬಹುನಿರೀಕ್ಷಿತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯವೂ ಸೇರಿದೆ. ಭಾರತ ತಂಡ ಟೌಂಟನ್‌ನಲ್ಲಿ ವೆಸ್ಟ್‌ಇಂಡೀಸ್, ಬ್ರಿಸ್ಟೋಲ್‌ನಲ್ಲಿ ಆಸ್ಟೇಲಿಯ ಹಾಗೂ ಲೆಸೆಸ್ಟರ್‌ನಲ್ಲಿ ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಜೂ.26 ರಂದು ಟೌಂಟನ್‌ನಲ್ಲಿ ವೆಸ್ಟ್‌ಇಂಡೀಸ್‌ನ್ನು ಎದುರಿಸುವ ಮೂಲಕ ಪ್ರಶಸ್ತಿಯನ್ನು ತನ್ನಲ್ಲೆ ಉಳಿಸಿಕೊಳ್ಳುವ ನಿಟ್ಟಿಯಲ್ಲಿ ಹೋರಾಟ ಆರಂಭಿಸಲಿದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಟೂರ್ನಮೆಂಟ್‌ನಲ್ಲಿ 28 ಪಂದ್ಯಗಳು ಸುಮಾರು 21 ದಿನಗಳ ಕಾಲ ನಡೆಯಲಿದೆ. ವಿಶ್ವದ 8 ಶ್ರೇಷ್ಠ ತಂಡಗಳ ನಡುವೆ ನಡೆಯುವ ರೌಂಡ್ ರಾಬಿನ್ ಪಂದ್ಯಗಳು ಸೆಮಿಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಲಾರ್ಡ್ಸ್‌ನಲ್ಲಿ ಜು.23 ರಂದು ಫೈನಲ್ ಪಂದ್ಯ ನಡೆಯುವುದು.
ಇಂಗ್ಲೆಂಡ್ ತಂಡ ಜು.9 ರಂದು ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯವನ್ನು ಹಾಗೂ ಜು.12 ರಂದು ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ.
2013ರ ಆವೃತ್ತಿಯ ರನ್ನರ್ಸ್-ಅಪ್ ವೆಸ್ಟ್‌ಇಂಡೀಸ್ ತಂಡ ಟೌಂಟನ್‌ನಲ್ಲಿ 3 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಜೂ.26 ರಂದು ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಪಂದ್ಯವೂ ಸೇರಿದೆ.
ಲೆಸೆಸ್ಟರ್ ಪಾಕಿಸ್ತಾನ ತವರು ಮೈದಾನವೆನಿಸಿಕೊಂಡಿದ್ದು, ಪಾಕ್ ತಂಡ 7 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಇದೇ ಮೈದಾನದಲ್ಲಿ ಆಡಲಿದೆ.
ಎರಡು ಸೆಮಿಫೈನಲ್ ಪಂದ್ಯಗಳು ಕ್ರಮವಾಗಿ ಜು.18 ಹಾಗೂ 20 ರಂದು ಡರ್ಬಿ ಹಾಗೂ ಬ್ರಿಸ್ಟೋಲ್‌ನಲ್ಲಿ ನಡೆಯುವುದು. ಲಾರ್ಡ್ಸ್‌ನಲ್ಲಿ ಜು.23 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಈಗಾಗಲೇ ಟಿಕೆಟ್‌ಗಳು ಮಾರಾಟವಾಗಿವೆ.
‘‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಮಹಿಳಾ ಕ್ರೀಡೆಯ ಅತ್ಯಂತ ಪ್ರಮುಖ ಜಾಗತಿಕ ಟೂರ್ನಿಯ ವೇಳಾಪಟ್ಟಿಯನ್ನು ಅನಾವರಣಗೊಳಿಸಲು ನನಗೆ ಅತೀವ ಆನಂದವಾಗುತ್ತಿದೆ’’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ತಿಳಿಸಿದ್ದಾರೆ.