ಮಣಿಪಾಲ: ಸಂಸ್ಕೃತಿ ಗ್ರಾಮದ ನಿರ್ಮಾತೃ ವಿಜಯನಾಥ ಶೆಣೈ ನಿಧನ
ಉಡುಪಿ, ಮಾ.9: ಮಣಿಪಾಲದ ಸಂಸ್ಕೃತಿ ಗ್ರಾಮ 'ಹೆರಿಟೇಜ್ ವಿಲೇಜ್' ನ ರೂವಾರಿ, ಅತ್ಯಪೂರ್ವ ವಾಸ್ತುವಿನ್ಯಾಸದ ಹಸ್ತಶಿಲ್ಪದ ನಿರ್ಮಾತೃ ಹಾಗೂ ಉಡುಪಿಯ ಸಾಂಸ್ಕೃತಿಕ ಹರಿಕಾರ ವಿಜಯನಾಥ ಶೆಣೈ ಅವರು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ಪ್ರಾಯವಾಗಿತ್ತು.
ಮಣಿಪಾಲ ಅನಂತನಗರದ ಮನೆಯಲ್ಲಿ ಕಳೆದ ರಾತ್ರಿ ಮಲಗಿದ್ದ ವಿಜಯನಾಥ ಶೆಣೈ ಅವರು ಇಂದು ಬೆಳಗ್ಗೆ ಮನೆಯವರು ನೋಡುವಾಗ ನಿದ್ದೆಯಲ್ಲೇ ಪ್ರಾಣ ತ್ಯಜಿಸಿದ್ದರು. ಅವರು ಪತ್ನಿ ಮಂಜುಳ, ಪುತ್ರ ಹಾಗೂ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ವಿಜಯನಾಥ ಶೆಣೈ ಅವರಿಗೆ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅನೇಕ ಪ್ರಮುಖ ಪ್ರಶಸ್ತಿಗಳು ದೊರಕಿವೆ. 2003ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜನಪದ ಪ್ರಶಸ್ತಿಗಳೂ ಸೇರಿವೆ.
ವಿಜಯನಾಥ ಶೆಣೈ ಅವರ ಪಾರ್ಥಿವ ಶರೀರವನ್ನು ಅವರ 50, ಅನಂತನಗರ ನಿವಾಸದಲ್ಲಿ ನಾಳೆ ಬೆಳಗ್ಗೆ 9:30ರಿಂದ 11:30ರವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಆ ಬಳಿಕ ಉಡುಪಿ ಬೀಡಿನಗುಡ್ಡೆ ಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಪರಿಚಯ: 1934ರಲ್ಲಿ ವಾಸುದೇವ ಜೋಗಪ್ಪ ಶೆಣೈ ಅವರ ಪುತ್ರನಾಗಿ ಉಡುಪಿಯಲ್ಲಿ ಜನಿಸಿದ ಶೆಣೈ, ವಿಜಯಬ್ಯಾಂಕಿನ ಉದ್ಯೋಗಿಯಾಗಿದ್ದರೂ, ಅವರ ಪ್ರವೃತ್ತಿಯ ಮೂಲಕವೇ ಜಗತ್ಪ್ರಸಿದ್ಧಿ ಪಡೆದಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದರೂ ಅವರು ಅಪೂರ್ವ ಕಲಾಸಕ್ತ ಹಾಗೂ ಸಂಗೀತಪ್ರೇಮಿಯಾಗಿದ್ದರು.
ವಿಜಯನಾಥ ಶೆಣೈ ಉಡುಪಿಯಲ್ಲಿ ಸಂಗೀತ ಸಭಾ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಅದರ ಮೂಲಕ ದೇಶದ ಘಟಾನುಘಟಿ ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಂಗೀತ ಕಲಾವಿದರ ಪ್ರತಿಭೆಗಳನ್ನು ಜಿಲ್ಲೆಯ ಕಲಾಸಕ್ತರಿಗೆ ಉಣಬಡಿಸಿದ್ದರು. ಪಂಡಿತ್ ಭೀಮ್‌ಸೇನ್ ಜೋಷಿ, ಬಿಸ್ಮಿಲ್ಲಾಖಾನ್, ಹರಿಪ್ರಸಾದ್ ಚೌರಾಸಿಯಾ, ಬಾಲಮುರಳಿಕೃಷ್ಣ, ಸಿತಾರ್ ಮಾಂತ್ರಿಕ ರವಿಶಂಕರ್ ಮುಂತಾದವರೆಲ್ಲರೂ ಉಡುಪಿಯಲ್ಲಿ ತಮ್ಮ ಕಚೇರಿ ನಡೆಸಲು ವಿಜಯನಾಥ್ ಶೆಣೈ ಅವರ ಪ್ರಯತ್ನವೇ ಕಾರಣವಾಗಿತ್ತು ಎಂದು ಅವರ ಹಿರಿಯ ಅಭಿಮಾನಿಯೊಬ್ಬರು ನೆನಪಿಸಿಕೊಳ್ಳುತ್ತಾರೆ. ಇದರೊಂದಿಗೆ ಅವರು ಅದ್ಭುತ ಸಂಘಟಕ ಸಹ ಆಗಿದ್ದರು.
ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪಾರಂಪರಿಕ ಮನೆಗಳ ಅಭಿಮಾನಿಯಾಗಿದ್ದ ವಿಜಯನಾಥ ಶೆಣೈ ಅವರು, ಇವುಗಳಲ್ಲಿ ಪ್ರಸಿದ್ಧ ವಾಸ್ತುಶಿಲ್ಪದ ಮನೆಗಳಲ್ಲಿ ನಿರ್ಲಕ್ಷಕ್ಕೆ ತುತ್ತಾದ, ಮೂಲೆಗುಂಪಾದ ಅಪೂರ್ವ ವಸ್ತುಗಳನ್ನು ಕಾಡಿ-ಬೇಡಿ ಪಡೆದು ಮಣಿಪಾಲದಲ್ಲಿ 'ಹಸ್ತಶಿಲ್ಪ' ವನ್ನು ನಿರ್ಮಿಸಿದ್ದರು.
ಬಳಿಕ ಮಣಿಪಾಲ ಮಣ್ಣಿಪಳ್ಳ ಕೆರೆಯ ಸಮೀಪ ಸರಕಾರದಿಂದ ಪಡೆದ ಆರು ಎಕರೆ ಜಾಗದಲ್ಲಿ ನಾಡಿನ ನಾನಾ ಕಡೆಗಳಲ್ಲಿ ಕೆಡವಲು, ಬೀಳಲು ಸಿದ್ಧವಾದ ಪುರಾತನ, ವಾಸ್ತುವೈಭವದ ಸಾಂಪ್ರದಾಯಿಕ ಮನೆ, ಅರಮನೆ, ಕಟ್ಟಡಗಳನ್ನು ಅಲ್ಲಿಂದ ಅದೇ ರೀತಿಯಲ್ಲಿ ತಂದು ಹತ್ತು ಹಲವು ಮನೆಗಳಿರುವ ಸಂಸ್ಕೃತಿ ಗ್ರಾಮವನ್ನು ನಿರ್ಮಿಸಿದ್ದರು. ಇದು ಈಗ ಜಿಲ್ಲೆಯ ಅತ್ಯಪೂರ್ವ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ.
ಈ ಸಂಸ್ಕೃತಿ ಗ್ರಾಮದ ನಿರ್ಮಾಣಕ್ಕಾಗಿ ಅವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದಲ್ಲದೇ ಫಿನ್ಲೆಂಡ್ ಹಾಗೂ ನಾರ್ವೆ ರಾಯಭಾರಿ ಕಚೇರಿಗಳ ಮೂಲಕ ಸಹಾಯವನ್ನು ಪಡೆದಿದ್ದರು. ಇಂದು ಅಲ್ಲಿ 400 ವರ್ಷಗಳ ಹಳೆಯ ಬಂಟರ ಗುತ್ತಿನ ಮನೆ, 500ವರ್ಷಗಳಷ್ಟು ಹಳೆಯದಾದ ವಿಜಯನಗರ ಕಾಲದ ಕಮಲ ಮಹಲ್‌ಗಳು ಮತ್ತೆ ತಲೆ ಎತ್ತಿ ನಿಲ್ಲುವಂತಾಗಿದೆ. ತಾವು ರಚಿಸಿದ ಹಸ್ತಶಿಲ್ಪ ಹೆರಿಟೇಜ್ ಟ್ರಸ್ಟ್ ಮೂಲಕ ಈ ಸಂಸ್ಕೃತಿ ಗ್ರಾಮವನ್ನು ಅವರು ನಿರ್ಮಿಸಿದ್ದಾರೆ. ಇಲ್ಲಿ ನೂರರಿಂದ 500 ವರ್ಷಗಳಷ್ಟು ಹಳೆಯದಾದ 26 ಮನೆ, ಅರಮನೆ, ಕಟ್ಟಡ, ಗುಡಿಗಳೊಂದಿಗೆ ಅತ್ಯಪೂರ್ವ ಕಲಾಸಂಗ್ರಹಗಳಿವೆ.
ಕಲಾ ಸಂಗ್ರಹಗಳಲ್ಲಿ ರಾಜಾ ರವಿವರ್ಮನ ಪೈಂಟಿಂಗ್‌ಗಳು, ತಂಜಾವೂರು ಸೇರಿದಂತೆ ವಿವಿಧ ಚಿತ್ರಕಲಾಕೃತಿಗಳು, ಇನ್ನೂ ಅನೇಕ ಅಮೂಲ್ಯವಸ್ತುಗಳಿವೆ. ಈ ಎಲ್ಲಾ ಸಂಗ್ರಹಗಳ ಸಂಪೂರ್ಣ ಪ್ರದರ್ಶನ ವ್ಯವಸ್ಥೆ ಇನ್ನೂ ಪೂರ್ಣಗೊಂಡಿಲ್ಲ.