×
Ad

​ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ: ಆಸ್ಪತ್ರೆಗೆ ದಾಖಲು

Update: 2017-03-09 18:21 IST

ಮಂಗಳೂರು, ಮಾ.9: ಮಂಗಳೂರು ವಿವಿ ಕಾಲೇಜಿನ ಪ್ರಥಮ ಬಿಬಿಎ ತರಗತಿಯ ವಿದ್ಯಾರ್ಥಿಗಳಿಬ್ಬರಿಗೆ ಅದೇ ಕಾಲೇಜಿನ ತೃತೀಯ ತರಗತಿಯ ವಿದ್ಯಾರ್ಥಿಗಳ ತಂಡವೊಂದು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ನವಾಝ್ ಮತ್ತು ಲುಕಾಸ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಧ್ಯೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಪೈಕಿ ಇಬ್ಬರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ:

ಕೆಲವು ದಿನಗಳಿಂದೀಚೆಗೆ ಸ್ಕಾರ್ಫ್ ಸಹಿತ ಮತೀಯ ವಿಚಾರಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ತಂಡವೊಂದು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ದ್ವೇಷ ಸಾಧಿಸುತ್ತಿತ್ತು ಎನ್ನಲಾಗಿದೆ. ಗುರುವಾರ ಪೂರ್ವಾಹ್ನ 11:15ರ ವೇಳೆಗೆ ಉಪನ್ಯಾಸಕಿ ತರಗತಿಯಿಂದ ಮರಳಿದ ತಕ್ಷಣ ಅನಿಲ್ ಮತ್ತು ಚೈತನ್ಯ ಸಹಿತ ಹಲವಾರು ವಿದ್ಯಾರ್ಥಿಗಳ ತಂಡ ಏಕಾಏಕಿ ತರಗತಿಯೊಳಗೆ ನುಗ್ಗಿ ನವಾಝ್ ಮತ್ತು ಲುಕಾಸ್‌ನ ಮೇಲೆ ಎರಗಿದೆ. ಕೈ ಮತ್ತು ಪಂಚ್‌ನಿಂದ ಹಲ್ಲೆ ನಡೆಸಿದ್ದಲ್ಲದೆ, ಪೆನ್ನಿನಿಂದ ಗೀರಿ ಗಾಯಗೊಳಿಸಿದೆ. ಉಕಾಸ್‌ನ ತಲೆಗೆ ಗಾಯವಾಗಿದ್ದು, ನವಾಝ್‌ನ ಮುಖಕ್ಕೆ ಗಾಯವಾಗಿದೆ.

ಈ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲ ಉದಯ ಕುಮಾರ್ ಇರ್ವತ್ತೂರು, ಕೆಲವು ಸಮಯದಿಂದ ಕೆಲವು ವಿದ್ಯಾರ್ಥಿಗಳು ವಿನಾ ಕಾರಣ ಕಾಲೇಜು ಪರಿಸರದಲ್ಲಿ ಆಶಾಂತಿ ಸೃಷ್ಟಿಸುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೂ ಪ್ರಯೋಜನವಾಗಲಿಲ್ಲ. ಗುರುವಾರ ನಡೆದ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಿಎಫ್‌ಐ ಆಗ್ರಹ:

ಎಬಿವಿಪಿ ಸಂಘಟನೆಗೆ ಸೇರಿರುವ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಹಲವು ಸಮಯದಿಂದ ಮುಸ್ಲಿಂ ವಿದ್ಯಾರ್ಥಿಗಳನ್ನು ದುರುಗುಟ್ಟಿ ನೋಡುವುದು, ಮಾತಿನಲ್ಲೇ ಛೇಡಿಸುವುದು ಇತ್ಯಾದಿ ಮಾಡುತ್ತಿತ್ತು. ಗುರುವಾರ ಅದು ಪುನರಾವರ್ತನೆಗೊಂಡಿದ್ದು, ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಧ್ಯೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳು ಕೂಡ ಆಸ್ಪತ್ರೆಗೆ ದಾಖಲಾಗಿ ಪ್ರಕರಣ ತಿರುಚುವ ಪ್ರಯತ್ನ ನಡೆಸಿದ್ದಾರೆ. ಹಾಗಾಗಿ ಪೊಲೀಸರು ಸಮರ್ಪಕ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಸಿಎಫ್‌ಐ ಮುಖಂಡರಾದ ಇಮ್ರಾನ್ ಮತ್ತು ಅಶ್ವನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News