×
Ad

ಉಳ್ಳಾಲ: ಬೈಕ್‌ನಲ್ಲಿ ಬಂದ ತಂಡದಿಂದ ಯುವಕನಿಗೆ ಚೂರಿ ಇರಿತ; ತಡೆಯಲು ಯತ್ನಿಸಿದ ಸಹೋದರನಿಗೂ ಕೈಗೆ ಇರಿತ

Update: 2017-03-09 18:50 IST

ಉಳ್ಳಾಲ, ಮಾ.9: ಉಳ್ಳಾಲ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆಯಲ್ಲಿ ಸಹೋದರನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಶಮೀರ್(26)ಎಂಬವರಿಗೆ ಎರಡು ಬೈಕ್‌ಗಳಲ್ಲಿ ಬಂದ ಐದು ಜನರ ತಂಡವು ಚೂರಿಯಿಂದ ಇರಿದು ಪರಾರಿಯಾದ ಘಟನೆ ಗುರುವಾರ ಸಂಜೆ ನಡೆದಿದ್ದು, ಘಟನೆಯಲ್ಲಿ ಚೂರಿ ಇರಿತವನ್ನು ತಡೆಯಲು ಯತ್ನಿಸಿದ ಸಹೋದರ ಸಿರಾಜ್ ಎಂಬವರಿಗೂ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ.

ಉಳ್ಳಾಲ ಹಿಲೇರಿಯಾನಗರ ಶಮೀರ್ ಕಲ್ಲಾಪಿನಿಂದ ಉಳ್ಳಾಲಕ್ಕೆ ಬೈಕ್‌ನಲ್ಲಿ ಸಹೋದರ ಸಿರಾಜ್‌ನನ್ನು ಕುಳ್ಳಿರಿಸಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

 ಉಳ್ಳಾಲದ ಟಾರ್ಗೆಟ್ ತಂಡದ ಇಲ್ಯಾಸ್ ಮತ್ತು ಆತನ ಸಹಚರರಾದ ಸುರ್ಮ ಇಮ್ರಾನ್, ಅಲ್ತಾಫ್ ಕಾಟಿಪಳ್ಳ, ಹಂಝ ಹಾಗೂ ಇನ್ನೊರ್ವ ಸೇರಿ ಇರಿದಿದ್ದಾರೆಂದು ಎಂದು ಆರೋಪಿಸಲಾಗಿದೆ. ಶಮೀರ್ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು ಹದಿನೈದು ದಿನಗಳ ಹಿಂದೆಯಷ್ಟೇ ಊರಿಗೆ ಹಿಂದಿರುಗಿದ್ದರು. ಶಮೀರ್ ಕುಟುಂಬವು ಇತ್ತೀಚೆಗೆ ಹಿಲೇರಿಯಾ ನಗರದಿಂದ ಸ್ಥಳಾಂತರಗೊಂಡು ಕಲ್ಲಾಪಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಗುರುವಾರ ಸಂಜೆ ಶಮೀರ್ ಕಲ್ಲಾಪುವಿನಿಂದ ಉಳ್ಳಾಲಕ್ಕೆ ತನ್ನ ಸಹೋದರ ಸಿರಾಜ್‌ನನ್ನು ಬೈಕ್‌ನಲ್ಲಿ ಕುಳ್ಳಿರಿಸಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂಬಾಳಿಸಿದ ಮೂವರ ತಂಡವು ಮಾಸ್ತಿಕಟ್ಟೆಯಲ್ಲಿ ಕಾಯುತ್ತಿದ್ದ ಇಬ್ಬರ ಜೊತೆ ಸೇರಿ ಶಮೀರ್ ಮೇಲೆ ಎರಗಿದ್ದಾರೆ. ಈ ಸಂದರ್ಭದಲ್ಲಿ ತಡೆಯಲು ಹೋದ ಶಮೀರ್ ಸಹೋದರ ಸಿರಾಜ್‌ಗೂ ದುಷ್ಕರ್ಮಿಗಳು ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಹಳೆ ದ್ವೇಷವೇ ಕಾರಣ:

ವಿದೇಶಕ್ಕೆ ತೆರಳುವ ಮುನ್ನ ಶಮೀರ್ ಉಳ್ಳಾಲದಲ್ಲಿ ತಂಡವೊಂದು ನಡೆಸುತ್ತಿದ್ದ ಹಫ್ತಾ ವ್ಯವಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೆನ್ನಲಾಗಿದ್ದು, ಹದಿನೈದು ದಿನಗಳ ಹಿಂದೆಯಷ್ಟೇ ಶಮೀರ್ ವಿದೇಶದಿಂದ ಮಂಗಳೂರು ವಿಮಾನ ಬಂದಿದ್ದಾಗ ಆರೋಪಿ ಇಲ್ಯಾಸ್ ಜೀವ ಬೆದರಿಕೆ ನೀಡಿದ್ದ ಎನ್ನಲಾಗಿದೆ.

ಚೂರಿ ಇರಿತದಿಂದ ಎದೆ ಹಾಗೂ ಪಕ್ಕೆಲುಬಿಗೆ ಗಂಭೀರ ಗಾಯಗೊಂಡ ಶಮೀರ್ ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸಿಪಿ ಶೃತಿ, ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಸಿಸಿಬಿ ಪಿಸಿಐ ಶಾಮ್‌ಸುಂದರ್ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News