26 ಹೊಸ ಸರಕಾರಿ ಬಸ್ ಮಾರ್ಗಗಳಿಗೆ ಅರ್ಜಿ: ಸಚಿವ ಪ್ರಮೋದ್
ಉಡುಪಿ, ಮಾ.9: ಉಡುಪಿ ಸುತ್ತಮುತ್ತಲಿನ ಪ್ರದೇಶಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸರಕಾರಿ ಬಸ್‌ಗಳಿಗೆ 26 ಹೊಸ ಮಾರ್ಗಗಳನ್ನು ಗುರು ತಿಸಿ ಆರ್‌ಟಿಎಗೆ ಅರ್ಜಿ ಹಾಕಲಾಗಿದೆ. ಮಾ.21ರಂದು ನಡೆಯುವ ಆರ್‌ಟಿಎ ಸಭೆಯಲ್ಲಿ ಪರವಾನಿಗೆ ಸಿಕ್ಕಿದರೆ ನಗರ ಮತ್ತು ಗ್ರಾಮೀಣ ಪ್ರದೇಶದ ಶೇ.90ರಷ್ಟು ಭಾಗದಲ್ಲಿ ಸರಕಾರಿ ಬಸ್ ಸೇವೆ ದೊರೆಯುವಂತಾ ಗುತ್ತದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ-ಕಾರ್ಕಳ ಮಾರ್ಗದಲ್ಲಿ ಆರಂಭಗೊಂಡಿರುವ ನಾಲ್ಕು ನೂತನ ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆ ಬಸ್‌ಗಳಿಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಉಡುಪಿ ನಗರದಲ್ಲಿ ಈಗಾಗಲೇ 12 ನರ್ಮ್ ಬಸ್‌ಗಳು ಸಂಚರಿಸುತ್ತಿದ್ದು, ಇನ್ನು 18 ಬಸ್‌ಗಳನ್ನು ಆರಂಭಿಸಲಾಗುವುದು ಎಂದರು.
ಉಡುಪಿ ಸಿಟಿಬಸ್ ನಿಲ್ದಾಣದ ಬಳಿ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನರ್ಮ್ ಬಸ್ ನಿಲ್ದಾಣವು ಇದೀಗ ಟೆಂಡರ್ ಹಂತದಲ್ಲಿದೆ. ಅದೇ ರೀತಿ ಬನ್ನಂಜೆಯಲ್ಲಿ ಪಬ್ಲಿಕ್ ಪ್ರೈವೇಟ್ ಪಾಟ್ನರ್ಶಿಪ್ (ಪಿಪಿಪಿ) ಮಾದರಿಯಲ್ಲಿ ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.
ಕಾರ್ಕಳ ಉಡುಪಿ ಮಾರ್ಗವಾಗಿ ನಾಲ್ಕು ಲೋ ಫ್ಲೋರ್ ಮಿಡಿ ಬಸ್ ಗಳನ್ನು ಆರಂಭಿಸಲಾಗಿದ್ದು, ಮುಂದೆ ಇನ್ನು ನಾಲ್ಕು ಬಸ್‌ಗಳನ್ನು ಆರಂಭಿಸ ಲಾಗುವುದು. ನಮ್ಮ ಉದ್ದೇಶ ಖಾಸಗಿ ಬಸ್ ಬೆಳೆಯಬೇಕು ಹಾಗೂ ಸರಕಾರಿ ಬಸ್ ಕೂಡ ಮುಂದುವರೆಯಬೇಕು ಎಂಬುದು. ಇವು ಎರಡೂ ಇದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ಆಯುಕ್ತ ವಿವೇಕಾನಂದ ಹೆಗ್ಡೆ, ವಿಭಾಗೀಯ ಸಂಚಾರಿ ಅಧೀಕ್ಷಕ ಜೈಶಾಂತ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ತಹಶೀಲ್ದಾರ್ ಮಹೇಶ್ಚಂದ್ರ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ಜನಾರ್ದನ ಭಂಡಾರ್ಕರ್, ಸೆಲಿನಾ ಕರ್ಕಡ ಮೊದ ಲಾದವರು ಉಪಸ್ಥಿತರಿದ್ದರು.
ಬಸ್ ವೇಳಾಪಟ್ಟಿ:
ಉಡುಪಿ -ಕಾರ್ಕಳ: ಬೆಳಗ್ಗೆ 6:10, 6:40, 7:50, 8:30, 9:30, 9:40, 11:10, ಮಧ್ಯಾಹ್ನ 12:00, 12:40, 12:50, 2:15, 2:25, ಸಂಜೆ 4:05, 4:25ಗಂಟೆ.
ಕಾರ್ಕಳ- ಉಡುಪಿ: ಬೆಳಗ್ಗೆ 6:10, 6:55, 7:55, 8:10, 9:25, 10:25, 11:05, 11:15, ಮಧ್ಯಾಹ್ನ 12:40, 1:40, 2:15, 2:25, ಸಂಜೆ 4:10, 5:15ಗಂಟೆ.