ಕುಡಿಯುವ ನೀರಿನ ಯೋಜನೆಗೆ 80ಲಕ್ಷ ರೂ. ಅನುದಾನ: ಸೊರಕೆ
ಉಡುಪಿ, ಮಾ.9: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾರ್ಯಪಡೆಗೆ ಈಗಾಗಲೇ ಬಿಡುಗಡೆಯಾಗಿರುವ 40ಲಕ್ಷ ರೂ. ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗಿದ್ದು, ಇದೀಗ ಮತ್ತೆ 40ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದನ್ನು ಸರಿಯಾಗಿ ಬಳಕೆ ಮಾಡಿ ನೀರಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಇಂದು ನಡೆದ ಕುಡಿ ಯುವ ನೀರಿನ ಸಮಸ್ಯೆಗೆ ಸಂಬಂಧಪಟ್ಟ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಬಾವಿ ಹಾಗೂ ಕೊಳವೆ ಬಾವಿಗಳಿದ್ದರೂ ಹೆಚ್ಚಿನದಕ್ಕೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಹೀಗಾಗಿ ಇವುಗಳ ಬಳಕೆ ಮಾಡುವ ಕೆಲಸ ನಡೆದಿಲ್ಲ. ಆದುದರಿಂದ ಅದಕ್ಕೆ ಈ ಅನುದಾನವನ್ನು ಬಳಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗುವುದು. ಹೆಚ್ಚುವರಿ ಅನುದಾನ ಬೇಕಾದರೆ ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ಜಿಪಂ, ತಾಪಂಗಳಿಂದ ಕೆಲವೊಂದು ಬಾವಿಗಳನ್ನು ನಿರ್ಮಾಣ ಮಾಡ ಲಾಗಿದ್ದು, ಅದರ ಸರಿಯಾದ ಬಳಕೆ ಆಗುತ್ತಿಲ್ಲ. ಬೋರ್‌ವೆಲ್‌ಗೆ ಪಂಪ್ ಆಳವಡಿಕೆ ಮಾಡಬೇಕು ಮತ್ತು ಅದರ ನೀರನ್ನು ತಾತ್ಕಾಲಿಕವಾಗಿ ಬಳಕೆ ಮಾಡಬೇಕು. ಮುಂದಿನ ಎರಡು ತಿಂಗಳ ಕಾಲ ಎಲ್ಲ ಕಡೆ ಇರುವ ನೀರಿನ ಮೂಲಗಳ ಗರಿಷ್ಠ ಬಳಕೆ ಮಾಡಬೇಕು. ಅನಿವಾರ್ಯವಾದರೆ ಮಾತ್ರ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪಟ್ಲ ಹಾಗೂ ಪಡುಬಿದ್ರೆ ಹಾಸ್ಟೆಲ್‌ಗಳಲ್ಲಿ ನೀರಿನ ಅಭಾವ ಉಂಟಾಗಿ ರುವ ವಿಚಾರವನ್ನು ಗ್ರಾಪಂ ಅಧ್ಯಕ್ಷರು ಸಭೆಯ ಗಮನ ಸೆಳೆದರು. ಹಾಸ್ಟೆಲ್‌ಗೆ ಅಗತ್ಯವಿರುವ ನೀರಿನ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಶಾಸಕರು ಸೂಚನೆ ನೀಡಿದರು. ಸಭೆಯಲ್ಲಿ ಹಾಜರಿದ್ದ ಗ್ರಾಪಂ ಅಧ್ಯಕ್ಷರು, ಪಿಡಿಓಗಳು, ತಾಪಂ ಸದಸ್ಯರು, ಜಿಪಂ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆಗಳನ್ನು ಪ್ರಾಸ್ತಾಪಿಸಿದರು.
ನಿವೇಶನ ಹಂಚಿಕೆಯಲ್ಲಿ ಪ್ರಥಮ:
ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗೆ ಒಂದು ಸಾವಿರ ಕುಟುಂಬಗಳಿಗೆ ಮನೆ ನಿವೇಶನವನ್ನು ಹಂಚಿಕೆ ಮಾಡಲಾಗಿದ್ದು, ಇದರಿಂದಾಗಿ ಉಡುಪಿ ತಾಲೂಕು ನಿವೇಶನ ಹಂಚಿಕೆಯಲ್ಲಿ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ತಿಳಿಸಿದರು.
ಇದೀಗ ಮನೆ ನಿವೇಶನಕ್ಕೆ ಮತ್ತೆ ಹಲವು ಗ್ರಾಪಂಗಳಿಂದ ಪ್ರಸ್ತಾವನೆಗಳು ಬಂದಿದ್ದು, ಅದಕ್ಕಾಗಿ 1000 ಕುಟುಂಬಗಳಿಗೆ ಬೇಕಾದ ನಿವೇಶನವನ್ನು ಮೀಸ ಲಿರಿಸುವ ಕೆಲಸ ಮಾಡಬೇಕು. ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗ ವಿದ್ದರೆ ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು. ಜಾಗ ಇಲ್ಲದ ಕಡೆ ಬೇರೆ ಗ್ರಾಪಂನಲ್ಲಿ ಜಾಗ ಒದಗಿಸಬೇಕು. ಫಲಾನುಭವಿಗಳನ್ನು ಆಯಾ ಗ್ರಾಮಸಭೆಯಲ್ಲಿ ಆಯ್ಕೆ ಮಾಡಬೇಕು. ಮನೆ ನಿವೇಶನಕ್ಕೆ ಹೆಚ್ಚಿನ ಮುತು ವರ್ಜಿ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಐಟಿಡಿಪಿ ಇಲಾಖೆಗೆ ಕೊರಗರ ಕಾಲೋನಿ ಅಭಿವೃದ್ದಿಗಾಗಿ 10ಕೋಟಿ ರೂ. ಅನುದಾನ ಬಂದಿದ್ದು, ಅಗತ್ಯ ಇರುವ ಗ್ರಾಪಂಗಳು ಸೋಮವಾರ ದೊಳಗೆ ಐಟಿಡಿಪಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಈ ಅನುದಾನದಲ್ಲಿ ಕಾಲೋನಿಯ ರಸ್ತೆ ಅಭಿವೃದ್ಧಿ, ಬಾವಿ ನಿರ್ಮಾಣ, ವಿದ್ಯುತ್ ಸೌಲಭ್ಯ, ಸಮುದಾಯ ಭವನ ನಿರ್ಮಾಣ ಮಾಡಬಹುದಾಗಿದೆ ಎಂದರು. ಸ್ಮಶಾನ ಅಭಿವೃದ್ದಿಗೆ ಸಂಬಂಧಿಸಿದಂತೆ ಆಯಾ ಗ್ರಾಪಂನ ಇಂಜಿನಿಯರ್‌ಗಳು ಯೋಜನೆ ರೂಪಿಸಿ ಅಗತ್ಯ ದಾಖಲೆಯನ್ನು ಸಲ್ಲಿಸಬೇಕು ಎಂದರು.
ಕಾಪು ಕ್ಷೇತ್ರಕ್ಕೆ ಸುವರ್ಣ ಗ್ರಾಮ ಯೋಜನೆಯಲ್ಲಿ ಎಂಟು ಗ್ರಾಮಗಳಿಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ. ಸಿಆರ್‌ಎಫ್‌ನಲ್ಲಿ 50ಕೋಟಿ ಅನು ದಾನ ಮಂಜೂರಾಗಿದೆ. ಸಡಕ್ ರಸ್ತೆ ಮಂಜೂರಾಗಿದೆ. ಏಳು ಸೇತುವೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಕರೆಯುವ ಹಂತ ದಲ್ಲಿದೆ. ಈ ಎಲ್ಲ ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯರಾದ ಚಂದ್ರಿಕಾ, ವಿಲ್ಸನ್, ಶಶಿಕಾಂತ್ ಪಡುಬಿದ್ರೆ, ಶಿಲ್ಪಾ ಸುವರ್ಣ, ತಾಪಂ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ತಹಶೀಲ್ದಾರ್ ಮಹೇಶ್ಚಂದ್ರ ಹಾಜರಿದ್ದರು.