ತ್ಯಾಗ, ಪ್ರೀತಿ, ಸೇವಾ ಮನೋಭಾವನೆ ಸ್ತ್ರೀಯರಲ್ಲಿ ಹೆಚ್ಚು: ಪೇಜಾವರ ಶ್ರೀ
ಉಡುಪಿ, ಮಾ.9: ವಿಶ್ವಶಾಂತಿಗೆ ಬೇಕಾಗಿರುವುದು ತ್ಯಾಗ, ಪ್ರೀತಿ ಹಾಗೂ ಸೇವಾ ಮನೋಭಾವನೆ. ಇದು ಸ್ತ್ರೀಯರಲ್ಲಿರುವಷ್ಟು ಪುರುಷರಲ್ಲಿ ಇಲ್ಲ. ಇದನ್ನು ಪುರುಷರು ಮಹಿಳೆಯರಿಂದ ಕಲಿಯಬೇಕಾಗಿದೆ. ಇದರಿಂದ ಲೋಕ ಕಲ್ಯಾಣ ಸಾಧ್ಯ ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠ ಮತ್ತು ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಗುರು ವಾರ ರಾಜಾಂಗಣದಲ್ಲಿ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿ ಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ. ಮಹಿಳೆಯರು ಅನ್ಯಾಯದ ವಿರುದ್ಧ ಹೋರಾಡುವ ದಿಟ್ಟತನ ತೋರಿಸಬೇಕು. ಸಮಾಜದಲ್ಲಿರುವ ಭ್ರಷ್ಟಾಚಾರ ವನ್ನು ತೊಲಗಿಸಲು ಮಹಿಳೆಯರು ಮನಸ್ಸು ಮಾಡಿದರೆ ಸಾಧ್ಯ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತ ನಾಡಿ, ಮಹಿಳಾ ಸಬಲೀಕರಣ ಎಂಬುದು ಮಹಿಳೆ ಮತ್ತು ಪುರುಷರು ಸಂಘರ್ಷಕ್ಕೆ ಒಳಗಾಗದೆ ನಿಜವಾದ ಅರ್ಥದಲ್ಲಿ ಆಗಬೇಕು. ಲಿಂಗ ತಾರ ತಾಮ್ಯವನ್ನು ಬಿಟ್ಟು ಪರಸ್ಪರ ಸಹಕಾರದೊಂದಿಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಹೂಡೆ ಸಾಲಿಹಾತ್ ಅರೇಬಿಕ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಖುಲ್ಸುಂ ಅಬೂಬಕ್ಕರ್ ವಹಿಸಿದ್ದರು. ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ಶಿಲ್ಪಾನಾಗ್ ಮಾತನಾಡಿದರು.
ವೇದಿಕೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರಳಾ ಕಾಂಚನ್, ತಾಲೂಕು ಕೋಶಾಧಿಕಾರಿ ಮಮತಾ ಎಸ್.ಶೆಟ್ಟಿ, ಉಪಾಧ್ಯಕ್ಷರಾದ ಸುಷ್ಮಾ ಎಸ್.ಶೆಟ್ಟಿ, ಸುಪ್ರಭಾ ಆಚಾರ್ಯ, ವಸಂತಿ ರಾವ್ ಕೊರಡ್ಕಲ್, ರಾಧಾದಾಸ್ ಮೊದ ಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶೋದಾ ಶೆಟ್ಟಿ ವಂದಿಸಿದರು. ಗೀತಾರವಿ ಹಾಗೂ ಪ್ರಸನ್ನ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಮಹಿಳಾ ಮಂಡಳಿಗಳಿಂದ ಸಾಂಸ್ಕೃತಿಕ ಸೌರಭದ ಸ್ಪರ್ಧಾಕೂಟ ಜರಗಿತು.