ವಿಪಕ್ಷ ಬಿಜೆಪಿಯ ವಿರೋಧ, ಪ್ರತಿಭಟನೆ ಗದ್ದಲದ ನಡುವೆ ಪುತ್ತೂರು ನಗರಸಭೆ 61.98 ರೂ ಲಕ್ಷದ ಮಿಗತೆ ಬಜೆಟ್ ಮಂಡನೆ
ಪುತ್ತೂರು, ಮಾ.9: ನಗರಸಭೆಯಲ್ಲಿ ಬಹುಮತ ಹೊಂದಿರುವ ವಿಪಕ್ಷ ಬಿಜೆಪಿ ಸದಸ್ಯರ ವಿರೋಧ,ಆಕ್ಷೇಪ ,ಪ್ರತಿಭಟನೆ ಗದ್ದಲದ ನಡುವೆಯೇ ಪುತ್ತೂರು ನಗರಸಭೆಯ ರೂ. 36,22,26,292 ಕೋಟಿ ಆದಾಯ ನಿರೀಕ್ಷೆ ಹಾಗೂ ರೂ.35,60,27,866 ಖರ್ಚು ವೆಚ್ಚಗಳನ್ನೊಳಗೊಂಡ ರೂ.61,98,426 ನ 2017-18ನೇ ಸಾಲಿನ ಮಿಗತೆ ಬಜೆಟ್ ಗುರುವಾರ ಮಂಡಿಸಲಾಯಿತು.
ಪುತ್ತೂರು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭೆ ನಡೆಯಿತು. ನಗರಸಭೆಯ ಆಯುಕ್ತರು ಸಭೆಯ ಕಲಾಪಗಳನ್ನು ಆರಂಭಿಸುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿಪಕ್ಷ ಬಿಜೆಪಿ ಸದಸ್ಯ ವಿನಯ ಭಂಡಾರಿ ಅವರು ಹಿಂದಿನ ಸಭೆಯ ನಡಾವಳಿಗಳು ಎಲ್ಲಿ ಎಂದು ಪ್ರಶ್ನಿಸಿದರು. ಸಾಮಾನ್ಯ ಸಭೆಯನ್ನು ಕರೆದು ಬಜೆಟ್‌ಗೆ ಸಂಬಂಧಿಸಿದ ಕೇವಲ ಒಂದು ವಿಷಯವನ್ನು ಮಾತ್ರ ಚರ್ಚೆಗೆ ಮಂಡಿಸಿರುವುದು ಸರಿಯಲ್ಲ. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ವಿಷಕ್ಷ ಸದಸ್ಯರಾದ ರಾಜೇಶ್ ಬನ್ನೂರು, ಜೀವಂಧರ್ ಜೈನ್, ರಾಮಣ್ಣ ಗೌಡ ಅಲಂಗ ಮತ್ತಿತರರು ನಗರಸಭೆಯ ಸಾಮಾನ್ಯ ಸಭೆ ನಡೆಯದೆ 4 ತಿಂಗಳಾಯಿತು. ಹಿಂದೆ ನಡೆದಿರುವ ಸಾಮಾನ್ಯ ಸಭೆಯ ಹಾಗೂ ವಿಶೇಷ ಸಭೆಯ ನಡಾವಳಿಗಳನ್ನು ಚರ್ಚಿಸಿ ಅನುಮೋದನೆ ಪಡೆಯುವುದು ಕಾನೂನು ನಿಯಮವಾಗಿದ್ದರೂ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ,ಹಿಂದಿನ ಸಭೆಯ ನಡಾವಳಿಗಳನ್ನು ದೃಢೀಕರಿಸದೆ ಯಾವ ಆಧಾರದಲ್ಲಿ ಸಭೆ ಕರೆದಿದ್ದೀರಿ ಎಂದು ಪ್ರಶ್ನಿಸಿದರು. ಈ ಸಭೆ ಕಾನೂನು ಚೌಕಟ್ಟಿನಲ್ಲಿ ಇಲ್ಲದೆ ಏಕಪಕ್ಷೀಯ ತೀರ್ಮಾನವಾಗಿರುವುದರಿಂದ ಇದಕ್ಕೆ ನಮ್ಮ 15 ಮಂದಿಯ ಆಕ್ಷೇಪವಿದೆ ಎಂದು ಘೋಷಿಸಿ ಇದಕ್ಕೆ ಆಯುಕ್ತರು ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಸಾಮಾನ್ಯಸಭೆಯಲ್ಲಿ ಈ ಹಿಂದಿನ ಸಭೆಯ ನಡಾವಳಿಗಳನ್ನು ಲಗತ್ತಿಸಿ ನೀಡಬೇಕೆಂದು ತಾನು ಅಧ್ಯಕ್ಷರಲ್ಲಿ ತಿಳಿಸಿದ್ದೆ ಎಂದು ಹೇಳುವ ಮೂಲಕ ನಗರಸಭೆಯ ಆಯುಕ್ತೆ ರೂಪಾ ಶೆಟ್ಟಿ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯ ಎಚ್.ಮಹಮ್ಮದ್ ಆಲಿ ಈ ಸಭೆಯನ್ನು ಬಜೆಟ್ ಮಂಡನೆಗಾಗಿ ಮಾತ್ರ ಕರೆಯಲಾಗಿದೆ. ಬಜೆಟ್‌ಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯಬೇಕಾಗಿರುವುದರಿಂದ ಇತರ ವಿಷಯ ಇಲ್ಲಿ ಪ್ರಸ್ತಾಪಿಸುವುದು ಬೇಡ. ಮುಂದಿನ ಸಭೆಯಲ್ಲಿ ಹಿಂದಿನ ಸಭೆಯ ನಡವಳಿಗಳ ಬಗ್ಗೆ ಚರ್ಚೆ ನಡೆಸೋಣ. ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ ಎಂದರು.
ಇದರಿಂದ ಕೆರಳಿದ ಉಪಾಧ್ಯಕ್ಷ ವಿಶ್ವನಾಥ ಗೌಡ ಸಹಿತ ಎಲ್ಲಾ 15 ಮಂದಿ ಬಿಜೆಪಿ ಸದಸ್ಯರು ಸದನದ ಬಾವಿಯೊಳಗಿಳಿದು ಪ್ರತಿಭಟನೆ ನಡೆಸಿ ಆಡಳಿತ ಪಕ್ಷದ ವಿರುದ್ಧ ದಿಕ್ಕಾರ ಕೂಗಿದರು. ಸಭೆಗೆ ಜಿಲ್ಲಾಧಿಕಾರಿ ಬರಬೇಕು, ನಮಗೆ ನ್ಯಾಯ ಸಿಗಬೇಕು ಎಂದು ಘೋಷಣೆ ಕೂಗಿದರು.
ಈ ಗೊಂದಲದ ನಡುವೆಯೇ ಅಧ್ಯಕ್ಷೆ ಜಯಂತಿ ಬಲ್ನಾಡು ಬಜೆಟ್ ಮಂಡಿಸಿದರು. ಬಿಜೆಪಿಯ ದಿಕ್ಕಾರ ಆಡಳಿತ ಪಕ್ಷದವರಿಂದ ಮೇಜು ಗುದ್ದಿ ಬಜೆಟ್ ಸ್ವಾಗತಿಸುವ ಗೊಂದಲ-ಗದ್ದಲದ ನಡುವೆ ಬಜೆಟ್ ಮಂಡನೆ ನಡೆಯಿತು. ಆಡಳಿತ ಪಕ್ಷದ ಸದಸ್ಯರು ಬಜೆಟ್ ಮಂಡಿಸಿದ ಅಧ್ಯಕ್ಷರ ಕೈಕುಲುಕಿ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷರು ಸಭೆ ಮುಕ್ತಾಯ ಎಂದು ಸಾರಿ ಆಡಳಿತ ಸದಸ್ಯರೊಂದಿಗೆ ಸದನದಿಂದ ಹೊರನಡೆದರು. ಬಳಿಕ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ಸದಸ್ಯರೂ ತೆರಳಿದರು.
ರೂ.61,98,426 ಮಿಗತೆ ಬಜೆಟ್: ಆರಂಭಿಕ ಶುಲ್ಕ ರೂ.5,83,65,313 ,2017-18ನೇ ಸಾಲಿನಲ್ಲಿ ನಗರಸಭೆಯ ನಿರೀಕ್ಷಿಸಲಾದ ಸ್ವಂತ ಆದಾಯ ರೂ.10,31,36 ,000 , ವೇತನ ಅನುದಾನ,ವಿದ್ಯುತ್ ಅನುದಾನ ಸೇರಿ ಒಟ್ಟು ನರೀಕ್ಷಿತ ಅನುದಾನ ರೂ.6,60,87,200, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರೀಕ್ಷಿತ ಅನುದಾನ ರೂ.9,45,17,000, ಇತರ ಹೊಂದಾಣಿಕೆ ಮೊತ್ತ ರೂ.4,01,20,779 ಸೇರಿದಂತೆ ಒಟ್ಟು ರೂ.36,22,26,292 ಆದಾಯ ನಿರೀಕ್ಷಿಸಲಾಗಿದೆ. ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯತೆಗಳಿಗೆ ರೂ.35,60,27,866 ನ್ನು ಹಂಚಿಕೆ ಮಾಡಲಾಗಿದ್ದು, ಇದು ರೂ.61,98,426 ಮಿಗತೆ ಬಜೆಟ್ ಮಂಡಿಸಲಾಯಿತು.
8ಪಿಟಿಆರ್1 : ಪುತ್ತೂರು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಗುರುವಾರ ವಿಪಕ್ಷ ಬಿಜೆಪಿ ಸದಸ್ಯರ ವಿರೋಧ, ಆಕ್ಷೇಪ, ಪ್ರತಿಭಟನೆಯ ನಡುವೆಯೇ ನಗರಸಭೆಯ 2017-18ನೇ ಸಾಲಿನ ಬಜೆಟ್ ಮಂಡಿಸಿದರು.
ಏಕಪಕ್ಷೀಯ ತೀರ್ಮಾನ-ರಾಜೇಶ್ ಬನ್ನೂರು ಆರೋಪ
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ಸದಸ್ಯ ರಾಜೇಶ್ ಬನ್ನೂರು ಅವರು ಹಿಂದಿನ ಸಭೆಯ ನಡವಳಿಗಳ ಕಡೆಗೆ ಗಮನ ನೀಡದೆ ಬಜೆಟ್ ಮಂಡನೆ ಮಾಡಿರುವುದು ಆಡಳಿತ ಪಕ್ಷದ ಏಕಪಕ್ಷೀಯ ತೀರ್ಮಾನವಾಗಿದ್ದು, ಕಳೆದ ಸಭೆಯಲ್ಲಿ ವಾರದ ಸಂತೆ ವಿಚಾರದಲ್ಲಿ ಕೈಗೊಳ್ಳಲಾದ ನಿರ್ಣಯಗಳಿಗೆ ಬೆಲೆ ಇಲ್ಲದಾಗಿದೆ. ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿದ್ದರೂ ಸ್ಥಾಯಿ ಸಮಿತಿ ರಚನೆ ಮಾಡಲಾಗಿಲ್ಲ. ಸ್ಥಾಯಿ ಸಮಿತಿ ಅಸ್ಥಿತ್ವವೇ ಇಲ್ಲ. ಹೈಕೋರ್ಟಿಗೆ ಇಬ್ಬರು ವಕೀಲರನ್ನು ನೇಮಕ ಮಾಡಿರುವುದಕ್ಕೂ ಆಕ್ಷೇಪ ಸಲ್ಲಿಸಿದ್ದೆವು ಎಂದು ಸಭೆಯ ಬಳಿಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪುತ್ತೂರು ನಗರಸಭೆಯ ಇತಿಹಾಸದಲ್ಲಿ ಒಂದೇ ದಿನ ಮೂರು ಸಭೆಗಳು ನಡೆಯುತ್ತಿರುವುದು ಇದೇ ಮೊದಲಾಗಿದ್ದು, ಇದು ಮೂರ್ಖತನದ ಎಂದು ಆರೋಪಿಸಿದರು.