ಉತ್ತರ ಕೊರಿಯದೊಂದಿಗೆ ವ್ಯವಹರಿಸಲು ಎಲ್ಲ ಆಯ್ಕೆಗಳು ಮುಕ್ತ :ವಿಶ್ವಸಂಸ್ಥೆಯಲ್ಲಿ ಅಮೆರಿಕ

Update: 2017-03-09 15:17 GMT

ವಿಶ್ವಸಂಸ್ಥೆ, ಮಾ. 9: ಉತ್ತರ ಕೊರಿಯದೊಂದಿಗೆ ವ್ಯವಹರಿಸಲು ಎಲ್ಲ ಆಯ್ಕೆಗಳು ಮುಕ್ತವಾಗಿವೆ ಎಂದು ಅಮೆರಿಕ ಬುಧವಾರ ಹೇಳಿದೆ ಹಾಗೂ ದಕ್ಷಿಣ ಕೊರಿಯ ಮತ್ತು ಅಮೆರಿಕಗಳ ಜಂಟಿ ಯುದ್ಧಾಭ್ಯಾಸ ಹಾಗೂ ಉತ್ತರ ಕೊರಿಯದ ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆಗಳೆರಡರ ಮೇಲೂ ನಿಷೇಧ ಹೇರಬೇಕು ಎಂಬ ಚೀನಾದ ಸಲಹೆಯನ್ನು ತಳ್ಳಿಹಾಕಿದೆ.

‘‘ನಾವು ಸಮತೋಲಿತ ವ್ಯಕ್ತಿಯೊಂದಿಗೆ ವ್ಯವಹಾರ ನಡೆಸುತ್ತಿಲ್ಲ’’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕ್ಕಿ ಹೇಲಿ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರನ್ನು ಉಲ್ಲೇಖಿಸಿ ಹೇಳಿದರು.

ಉತ್ತರ ಕೊರಿಯ ಇತ್ತೀಚೆಗೆ ನಡೆಸಿದ ನಾಲ್ಕು ಪ್ರಕ್ಷೇಪಕ ಕ್ಷಿಪಣಿಗಳ ಉಡಾವಣೆಯ ಬಗ್ಗೆ ಭದ್ರತಾ ಮಂಡಳಿಯಲ್ಲಿ ನಡೆದ ಚರ್ಚೆಯ ವೇಳೆ ಅವರು ಮಾತನಾಡುತ್ತಿದ್ದರು.

‘‘ಈ ಹಂತದಲ್ಲಿ ನಾವು ಕಿಮ್ ಜಾಂಗ್ ಉನ್ ಅವರ ನಂಬಲಸಾಧ್ಯ ಬೇಜವಾಬ್ದಾರಿಯ ಅಹಂಕಾರವನ್ನು ನೋಡುತ್ತಿದ್ದೇವೆ’’ ಎಂದರು.

ಉತ್ತರ ಕೊರಿಯದೊಂದಿಗೆ ವ್ಯವಹರಿಸುವ ವಿಧಾನವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರ್ರೂಪಿಸುತ್ತಿದ್ದಾರೆ ಎಂದು ಹೇಳಿದ ಅವರು, ‘‘ಎಲ್ಲ ಆಯ್ಕೆಗಳು ಮುಕ್ತವಾಗಿವೆ’’ ಎಂದು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News