ಸಿಐಎ ಗುತ್ತಿಗೆದಾರರಿಂದ ಸೋರಿಕೆ ಸಾಧ್ಯತೆ : ಅಮೆರಿಕ ಅಧಿಕಾರಿಗಳ ಶಂಕೆ

Update: 2017-03-09 15:24 GMT

ವಾಶಿಂಗ್ಟನ್, ಮಾ. 9: ಸಿಐಎ ಬಳಸುತ್ತಿರುವ ಕನ್ನ (ಹ್ಯಾಕಿಂಗ್) ಸಾಧನಗಳ ಕುರಿತ ಮಾಹಿತಿಯನ್ನು ಸಿಐಎ ಗುತ್ತಿಗೆದಾರರು ವಿಕಿಲೀಕ್ಸ್‌ಗೆ ಸೋರಿಕೆ ಮಾಡಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಗುಪ್ತಚರ ಮತ್ತು ಕಾನೂನು ಅನುಷ್ಠಾನ ಅಧಿಕಾರಿಗಳು ಬುಧವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಈ ಮಾಹಿತಿ ಸೋರಿಕೆ ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಕಳೆದ ವರ್ಷದ ಕೊನೆಯಿಂದಲೇ ಮಾಹಿತಿಯಿತ್ತು ಎಂದು ತಮ್ಮ ಗುರುತು ಬಹಿರಂಗಪಡಿಸಲು ನಿರಾಕರಿಸಿದ ಇಬ್ಬರು ಅಧಿಕಾರಿಗಳು ತಿಳಿಸಿದರು.

ಸಿಐಎಯ ವಿವಿಧ ಕನ್ನ ವಿಧಾನಗಳನ್ನು ಸೂಚಿಸುವ ಹಲವಾರು ದಾಖಲೆಗಳನ್ನು ‘ವಿಕಿಲೀಕ್ಸ್’ ಮಂಗಳವಾರ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ.
ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ)ಯ ಕನ್ನಗಾರರು ತಮ್ಮ ಅತ್ಯಾಧುನಿಕ ಸಾಫ್ಟ್‌ವೇರ್‌ಗಳ ಮೂಲಕ ಆ್ಯಪಲ್‌ನ ಐಫೋನ್‌ಗಳು, ಗೂಗಲ್‌ನ ಆ್ಯಂಡ್ರಾಯ್ಡಾ ಚಾಲಿತ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಉಪಕರಣಗಳನ್ನು ಪ್ರವೇಶಿಸಿ ಬರಹ ಮತ್ತು ಧ್ವನಿ ಸಂದೇಶಗಳು ಎನ್‌ಕ್ರಿಪ್ಟ್ (ಸಂಕೇತಾಕ್ಷರಗಳು) ಆಗುವ ಮೊದಲೇ ಓದುತ್ತಾರೆ ಎಂಬುದಾಗಿ ವಿಕಿಲೀಕ್ಸ್ ಹೇಳಿದೆ.

ಸಿಐಎಯ ಭದ್ರತಾ ಉಲ್ಲಂಘನೆ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಅತೀವ ಕಳವಳ’ ಹೊಂದಿದ್ದಾರೆ ಎಂದು ಶ್ವೇತಭವನ ಬುಧವಾರ ಹೇಳಿದೆ.
‘‘ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುವವರಿಗೆ ಕಾನೂನು ಪ್ರಕಾರ ಅತ್ಯಂತ ಗರಿಷ್ಠ ಪ್ರಮಾಣದ ಶಿಕ್ಷೆ ನೀಡಲಾಗುವುದು’’ ಎಂದು ಶ್ವೇತಭವನದ ವಕ್ತಾರ ಸಿಯನ್ ಸ್ಪೈಸರ್ ನುಡಿದರು.

ಅಮೆರಿಕ ವಿರೋಧಿಗಳಿಗೆ ಸಹಾಯ: ಸಿಐಎ
 ತನ್ನ ಗುಪ್ತ ಮಾಹಿತಿ ಸಂಗ್ರಹ ವಿಧಾನಗಳನ್ನು ಸೋರಿಕೆ ಮಾಡುವ ಮೂಲಕ ವಿಕಿಲೀಕ್ಸ್ ಅಮೆರಿಕನ್ನರನ್ನು ಅಪಾಯಕ್ಕೆ ಗುರಿಪಡಿಸುತ್ತಿದೆ, ಅಮೆರಿಕದ ವಿರೋಧಿಗಳಿಗೆ ನೆರವು ನೀಡುತ್ತಿದೆ ಹಾಗೂ ಭಯೋತ್ಪಾದನೆ ಬೆದರಿಕೆ ವಿರುದ್ಧದ ಅಮೆರಿಕದ ಹೋರಾಟದಲ್ಲಿ ತಡೆಯೊಡ್ಡುತ್ತಿದೆ ಎಂದು ಸಿಐಎ ಬುಧವಾರ ಆರೋಪಿಸಿದೆ.

ಆದಾಗ್ಯೂ, ಮಂಗಳವಾರ ವಿಕಿಲೀಕ್ಸ್ ಪ್ರಕಟಿಸಿದ ದಾಖಲೆಗಳ ಸಿಂಧುತ್ವವನ್ನು ಖಚಿತಪಡಿಸಲು ಸಿಐಎ ವಕ್ತಾರೆ ಹೆದರ್ ಫ್ರಿಟ್ಝ್ ಹೊರ್ನಿಯಾಕ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News