×
Ad

ಕೊಲ್ಲೂರು ವಲಯ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಚಿನ್ನಾಭರಣ, 6ಲಕ್ಷ ನಗದು ಸಹಿತ ಅಕ್ರಮ ಆಸ್ತಿ ಗಳಿಕೆ ಪತ್ತೆ

Update: 2017-03-09 21:30 IST

ಉಡುಪಿ, ಮಾ.9: ಉಡುಪಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ನಾಲ್ಕು ತಂಡಗಳು ಗುರುವಾರ ಬೆಳಗ್ಗೆ 7ಗಂಟೆ ಸುಮಾರಿಗೆ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯರ ಮನೆ, ವಸತಿಗೃಹ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅಪಾರ ಮೊತ್ತದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದೆ.

ಕಂಬದಕೋಣೆಯಲ್ಲಿರುವ ಹೊಸ ಮನೆ ಱವನಶ್ರೀೞ, ಹುಟ್ಟೂರು ಅಜ್ರಿ ಯಲ್ಲಿರುವ ತಂದೆ ಮನೆ, ಕೊಲ್ಲೂರಿನಲ್ಲಿರುವ ಕಚೇರಿ ಹಾಗೂ ಕ್ವಾರ್ಟರ್ಸ್‌ ಮತ್ತು ಕಿರಿಮಂಜೇಶ್ವರದಲ್ಲಿರುವ ಅವರ ಅತ್ತೆ ಮನೆಯ ಮೇಲೆ ತಂಡಗಳು ದಾಳಿ ನಡೆಸಿ ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿವೆ.

ದಾಖಲೆಗಳನ್ನು ಪರಿಶೀಲಿಸಿದಾಗ ಶಿವರಾಮ ಆಚಾರ್ಯರಿಗೆ ಸಂಬಂಧಿ ಸಿದ ನಾಗೂರಿಯಲ್ಲಿ 10ಸೆಂಟ್ಸ್ ಜಾಗ, ಅಜ್ರಿಯಲ್ಲಿ 27ಸೆಂಟ್ಸ್ ಜಾಗ ಮತ್ತು ಎರಡು ವಾಣಿಜ್ಯ ಸಂಕೀರ್ಣಗಳು, 10 ಬ್ಯಾಂಕ್ ಖಾತೆಗಳು, ಸುಮಾರು 10ಲಕ್ಷ ರೂ. ವೌಲ್ಯದ ಚಿನ್ನಾಭರಣ, 3 ವರ್ಷಗಳ ಹಿಂದೆ ನಿರ್ಮಿಸಿದ ಕಂಬದಕೋಣೆ ಮನೆಯಲ್ಲಿ 2.5ಲಕ್ಷ ರೂ. ಮತ್ತು ಕಚೇರಿಯಲ್ಲಿ 3.70ಲಕ್ಷ ರೂ. ನಗದು, ಸ್ವಿಫ್ಟ್ ಮತ್ತು ಮಾರುತಿ 800 ಕಾರುಗಳು ಹಾಗೂ ಒಂದು ಡೈರಿ ಪತ್ತೆಯಾಗಿವೆ.

ಶಿವರಾಮ ಆಚಾರ್ಯರ ಪತ್ನಿ ಸ್ಥಳೀಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಬೇರೆ ಆದಾಯದ ಯಾವುದೇ ಮೂಲಗಳು ಇಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ದಾಖಲೆಗಳ ಪರಿಶೀಲನೆ ಕಾರ್ಯವು ಸಂಜೆಯವರೆಗೂ ಮುಂದುವರೆದಿದೆ. ಹಾಗಾಗಿ ಇವರ ಇನ್ನಷ್ಟು ಅಕ್ರಮ ಆಸ್ತಿ ಗಳಿಕೆ ಹೊರಬರಬಹುದು ಎಂದು ತಿಳಿದು ಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕ ಎಸ್.ಎಲ್.ಚನ್ನಬಸಪ್ಪ ನಿರ್ದೇಶನ ದಲ್ಲಿ ಉಡುಪಿ ಡಿವೈಎಸ್ಪಿ ಅರುಣ್ ಕುಮಾರ್, ನಿರೀಕ್ಷಕರಾದ ಸತೀಶ್, ರಂಗನಾಥ್, ಬ್ರಿಜೇಶ್, ಕೃಷ್ಣಮೂರ್ತಿ, ರಮೇಶ್, ರಾಘವೇಂದ್ರ ಸೇರಿದಂತೆ ಒಟ್ಟು 30 ಮಂದಿಯ ತಂಡ ಈ ದಾಳಿ ನಡೆಸಿದೆ.

ಶಿವರಾಮ ಆಚಾರ್ಯರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದಾಖಲೆ ಗಳನ್ನು ಪರಿಶೀಲಿಸುವ ಕಾರ್ಯ ಮುಂದುವರೆದಿದೆ. ಒಬ್ಬ ಡಿವೈಎಸ್ಪಿ, 7 ಇನ್‌ಸ್ಪೆಕ್ಟರ್ ಸೇರಿದಂತೆ ಒಟ್ಟು 30 ಮಂದಿಯ ನಾಲ್ಕು ತಂಡ ಏಕಕಾಲಕ್ಕೆ ಈ ದಾಳಿ ನಡೆಸಿದೆ. ಸದ್ಯಕ್ಕೆ ಪತ್ತೆಯಾಗಿರುವ ಅಕ್ರಮ ಆಸ್ತಿಯನ್ನು ವಶಪಡಿಸಿ ಕೊಳ್ಳಲಾಗಿದೆ.

-ಎಸ್.ಎಲ್.ಚನ್ನಬಸಪ್ಪ, ಪೊಲೀಸ್ ಅಧೀಕ್ಷಕ, ಭ್ರಷ್ಟಾಚಾರ ನಿಗ್ರಹ ದಳ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News