ಡಂಪಿಂಗ್ ಯಾರ್ಡ್‌ಗೆ ಬೆಂಕಿ ಬಿದ್ದ ವಿಚಾರ, ವಾಗ್ವಾದ : ವಿಪಕ್ಷ ಬಿಜೆಪಿಯಿಂದ ಸಭೆ ಬಹಿಷ್ಕಾರ
ಪುತ್ತೂರು, ಮಾ.9: ಪುತ್ತೂರು ನಗರಸಭೆಯ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಕಳೆದ ಒಂಭತ್ತು ದಿನಗಳಿಂದ ಹೊತ್ತಿ ಉರಿಯುತ್ತಿರುವ ಬೆಂಕಿ ನಗರ ಸಭೆಯ ಪ್ರಾಂಗಣಕ್ಕೆ ಇದೀಗ ಬಿದ್ದಿದ್ದು, ಬೆಂಕಿ ನಂದಿಸುವಲ್ಲಿ ಪುತ್ತೂರು ನಗರಸಭೆಯ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ಬಿಜೆಪಿ ಸದಸ್ಯರು ಆರೋಪಿಸಿದ, ಈ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ವಿಪಕ್ಷ ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿ ಹೊರ ನಡೆದ ಘಟನೆ ಗುರುವಾರ ನಡೆದ ಪುತ್ತೂರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ಪುತ್ತೂರು ನಗರಸಭೆಯ ವಿಶೇಷ ಸಾಮಾನ್ಯ ಸಭೆಯು ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಜೆಂಡಾ ಓದುತ್ತಿದ್ದಂತೆ ಮಾತನಾಡಿದ ವಿಪಕ್ಷ ಬಿಜೆಪಿ ಸದಸ್ಯ ರಾಮಣ್ಣ ಗೌಡ ಹಲಂಗ ಅವರು ಬನ್ನೂರು ಡಂಪಿಂಗ್ ಯಾರ್ಡ್‌ಗೆ ಬೆಂಕಿ ಬಿದ್ದು ಒಂಭತ್ತು ದಿನಗಳಾಯಿತು. ಬೆಂಕಿ ಆರಿಸುವ ವಿಚಾರದಲ್ಲಿ ನಗರಸಭೆ ವಿಫಲವಾಗಿದೆ ಎಂದು ಆರೋಪಿಸಿದರು.
ಅಜೆಂಡಾ ಓದುವ ಸಮಯದಲ್ಲಿ ಇತರ ವಿಷಯವನ್ನು ಪ್ರಸ್ತಾಪಿಸುವುದು ಬೇಡ. ಸಂಬಂಧಿಸಿದ ವಿಷಯ ಬರುವಾಗ ಚರ್ಚೆ ನಡೆಸಿ ಎಂದು ರಾಮಣ್ಣ ಗೌಡ ಪ್ರಸ್ತಾಪವನ್ನು ತಡೆದರು. ಇದರಿಂದ ಕೆರಳಿದ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಿಜೆಪಿ ಸದಸ್ಯ ರಾಜೇಶ್ ಬನ್ನೂರು ಮಾತನಾಡಿ ಊರಿಗೆ ಬೆಂಕಿ ಬಿದ್ದಿದೆ. ಆದರೆ ಅಜೆಂಡಾದಲ್ಲಿ ವಿಷಯವೇ ಇಲ್ಲ. ಬೆಂಕಿ ಆರಿಸುವ ವಿಚಾರದಲ್ಲಿ ಯಾವುದೇ ಶೀಘ್ರ ಕ್ರಮ ಕೈಗೊಂಡಿಲ್ಲ. ಬೆಂಕಿ ಕೊಟ್ಟು ಬಳಿಕ ಮೈಸೂರಿಗೆ ಹೋಗಿದ್ದೀರಿ ಎಂದು ಆಡಳಿತ ಅಧ್ಯಕ್ಷರ ಮೇಲೆ ವಾಗ್ದಾಳಿ ನಡೆಸಿದರು.
ಬೆಂಕಿ ಕೊಟ್ಟಿದ್ದೇವೆ ಎನ್ನುವುದಕ್ಕೆ ದಾಖಲೆ ಕೊಡಿ. ದಾಖಲೆ ಸಹಿತ ದೂರು ನೀಡಿ. ಸುಖಾಸುಮ್ಮನೆ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡಿದರು. ಅಗತ್ಯ ವಿಷಯ ಮಾತನಾಡಲು ಅವಕಾಶ ನೀಡುವಂತೆ ಸದಸ್ಯ ಜೀವಂಧರ್ ಜೈನ್ ಮನವಿ ಮಾಡಿದರು. ಡಂಪಿಂಗ್ ಯಾರ್ಡ್‌ನ ವಿಚಾರ ಅಜೆಂಡಾದ ಕೊನೆಗೆ ಮಾತನಾಡಲು ಇದೆ ಎಂದು ಆಡಳಿತ ಪಕ್ಷದ ಮಹಮ್ಮದ್ ಆಲಿ ಅವರು ಹೇಳಿದರು. ನಾವು ಕೇಳಿದ್ದು ಅಧ್ಯಕ್ಷರಲ್ಲಿ, ಅವರೇ ನಮಗೆ ಉತ್ತರ ನೀಡಬೇಕು ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು.
ರಾಜೇಶ್ ಬನ್ನೂರು ಅವರು ಮಾತನಾಡಿ ಬೆಂಕಿ ಆರಿಸುವ ವಿಚಾರವನ್ನು ರಾಮಣ್ಣ ಗೌಡರಿಗೆ ಬಿಟ್ಟುಕೊಡುತ್ತಿದ್ದರೂ ಈಗ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ದೂರಿದರು.
ಒಂದೇ ದಿನ ಮೂರು ಸಭೆಯನ್ನು ಕರೆದು, ಪುತ್ತೂರು ನಗರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರ್ಖತನದ ಕೆಲಸ ಮಾಡಲಾಗಿದೆ. ಸಾಮಾನ್ಯ ಸಭೆ ಕರೆಯಲು ಕಾರಣ ಬೇಕು. ಡಂಪಿಂಗ್ ಯಾರ್ಡ್‌ಗೆ ಬೆಂಕಿ ಬಿದ್ದಾಗಲೇ ವಿಶೇಷ ಸಭೆ ಕರೆಯಬೇಕಿತ್ತು. ಇದನ್ನು ಮಾಡದೇ ಒಮ್ಮೆಗೇ ಮೂರು ಸಭೆ ಕರೆದದ್ದು ಸರಿಯಲ್ಲ. ಆದ್ದರಿಂದ ಈ ಸಭೆಯನ್ನು ಮುಂದಕ್ಕೆ ಹಾಕಬೇಕು. ಯಾವುದೇ ನಡಾವಳಿಯನ್ನು ಲಗ್ತೀಕರಿಸದೇ ಸಭೆ ನಡೆಸುವುದಕ್ಕೆ ಆಕ್ಷೇಪವಿದೆ ಎಂದು ತಿಳಿಸಿದರು.
ಈ ವಿಷಯದಲ್ಲಿ ಸಾಕಷ್ಟು ಚರ್ಚೆ, ವಾಗ್ವಾದ ನಡೆದು ಆಕ್ಷೇಪದ ಪ್ರತಿಯನ್ನು ಉಪಾಧ್ಯಕ್ಷ ವಿಶ್ವನಾಥ ಗೌಡ ಅವರು ಅಧ್ಯಕ್ಷರಿಗೆ ಸಲ್ಲಿಸಿದರು. ಪತ್ರದ ಪ್ರತಿಯನ್ನು ನೀಡಲು ಮುಂದಾಗದ ಅಧ್ಯಕ್ಷರ ವಿರುದ್ದ ಬಿಜೆಪಿ ಸದಸ್ಯರು ದಿಕ್ಕಾರ ಕೂಗಿ ಪ್ರತಿಭಟನೆ ವ್ಯಕ್ತಪಡಿಸಿದರು. ಆಡಳಿತ ಪಕ್ಷದ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಸಭೆಯಿಂದ ಹೊರನಡೆದರು.