ದಾದಿಯರ ಕೆಲಸ ಎಲ್ಲ ವೃತ್ತಿಗಿಂತ ಉದಾತ್ತ: ಎಂ.ಚಂದ್ರಶೇಖರ್
ಉಳ್ಳಾಲ, ಮಾ.9: ದಾದಿಯರ ಕೆಲಸ ಎಲ್ಲಾ ವೃತ್ತಿಗಿಂತ ಸ್ಮರಣೀಯ ಹಾಗೂ ಉದಾತ್ತವಾಗಿದೆ. ಹೀಗಾಗಿ ಕೆಲಸದ ವೇಳೆ ಪ್ರಾಮಾಣಿಕತೆ ಜೊತೆಗೆ ಆತ್ಮ ಸ್ಥೈರ್ಯವಿದ್ದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯವಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ಸುಭಾಷ್ ನಗರದ ಕೆ. ಪಾಂಡ್ಯರಾಜ ಬಲ್ಲಾಳ್ ನರ್ಸಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಗುರುವಾರ ನಡೆದ ನರ್ಸಿಂಗ್ ವಿದ್ಯಾರ್ಥಿಗಳ ಪದವಿ ಪ್ರಧಾನದ ಜೊತೆ ವಾರ್ಷಿಕೋತ್ಸವ ಹಾಗೂ ದೀಪ ಬೆಳಕಿನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕವಾದ ಸಮಸ್ಯೆಗಳಿರುತ್ತದೆ. ಆದರೆ ನಮ್ಮ ವೃತ್ತಿಯ ವೇಳೆ ಮಾಡುವ ಕೆಲಸದ ಬಗ್ಗೆ ಮಾತ್ರ ಹೆಚ್ಚಿನ ಗಮನವನ್ನು ಕೊಡಬೇಕು. ಅದರಲ್ಲೂ ದಾದಿಯರು ರೋಗಿಗಳ ಜೊತೆಗೆ ಮುಕ್ತ ಮನಸ್ಸಿನಿಂದ ಮಾತನಾಡುವ ಮೂಲಕ ಅವರಲ್ಲಿ ಇರುವ ಸಮಸ್ಯೆಗಳನ್ನು ಹಾಗೂ ಅನುಮಾನಗಳನ್ನು ದೂರ ಮಾಡಲು ಸಾಧ್ಯವಿದೆ. ಕೆಲಸದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ತಿಳಿದುಕೊಂಡಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪದವಿ ಪಡೆಯುವುದು ಮುಖ್ಯವಲ್ಲ. ಅದರ ನಂತರ ಮಾಡುವ ಕೆಲಸದಲ್ಲಿ ತೋರಿಸುವ ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ.
ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಎಲ್ಲಿಗೂ ಹೋಗಿ ಕೆಲಸ ಮಾಡಬಹುದು. ಭಾರತದ ಸಂವಿಧಾನವನ್ನು ರಕ್ಷಿಸುವ ಹಾಗೂ ಅದಕ್ಕೆ ಗೌರವವನ್ನು ಸೂಚಿಸುವ ಜವಾಬ್ದಾರಿ ಎಲ್ಲರಿಗೂ ಇದೆ. ಹೀಗಾಗಿ ಯಾವುದು ತಪ್ಪು ಎನಿಸುತ್ತದೋ ಅದರ ವಿರುದ್ಧ ಧ್ವನಿ ಎತ್ತುವ ಹಕ್ಕು ಹಾಗೂ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಸವಿತಾ ಬಿ.ಎಸ್, ದಾದಿಯರು ಪ್ರತಿಯೊಬ್ಬ ರೋಗಿಯ ಬಗ್ಗೆಯೂ ಕಾಳಜಿಯನ್ನು ತೋರಿಸುವುದರ ಜೊತೆಗೆ ಅವರು ಅದ್ಭುತವಾದ ಜ್ಞಾನವನ್ನು ಹೊಂದಿರಬೇಕು. ಸಮಯ ಪಾರಿಪಾಲನೆಯ ಜೊತೆಗೆ ಸಂವಹನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಕೆಲಸದ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಿದೆ. ರೋಗಿ ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯ ಸಂದರ್ಭದಲ್ಲಿ ಹೆಚ್ಚಿನ ಜ್ಞಾನವನ್ನು ನೀಡುವ ಪಾಂಡಿರಾಜ ಕಾಲೇಜಿನ ಕೆಲಸ ಶ್ಲಾಘನೀಯ ಎಂದರು. ಸಂಸ್ಥೆಯ ಆಡಳಿತ ಮುಖ್ಯಸ್ಥೆ ಡಾ. ಸುಮತಿ ಬಳ್ಳಾಲ್ ಬಂಗಾರದ ಪದಕವನ್ನು ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನವನ್ನು ಮಾಡಿ ಶುಭ ಹಾರೈಸಿದರು.
ಕ್ರೀಡೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ವಿಜೇತರಿಗೆ ಭೌತ ಚಿಕಿತ್ಸಾ ವಿಭಾಗದ ಪ್ರಾಂಶುಪಾಲ ಸುರ್ಜಿತ್ ಚಕ್ರವರ್ತಿ ಬಹುಮಾನ ವಿತರಿಸಿದರು. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಕೈನಿ ಸಿಸಿಲಿಯಾ ಉಪಸ್ಥಿತರಿದ್ದರು.
ಶಾಂತಿಪ್ರಿಯ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಸೋನಿಯ ಸೆಬೆಸ್ಟಿಯನ್ ವಂದಿಸಿದರು.