ಮಾ.10ರಿಂದ 'ರಾಷ್ಟ್ರೀಯ ಲೆಕ್ಸ್ -17 ಅಲ್ಟಿಮಾ ಕಾನೂನು ಹಬ್ಬ'
ಮಂಗಳೂರು, ಮಾ.9: ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮೂರು ದಿನಗಳ 'ರಾಷ್ಟ್ರೀಯ ಲೆಕ್ಸ್ -17 ಅಲ್ಟಿಮಾ ಕಾನೂನು ಹಬ್ಬ' ವನ್ನು ಮಾ.10ರಿಂದ 12ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಈ ಲೆಕ್ಸ್ ಅಲ್ಟಿಮಾ ಕಾನೂನು ಹಬ್ಬದಲ್ಲಿ ದೇಶದ ವಿವಿಧೆಡೆಯಿಂದ 120ಕ್ಕೂ ಹೆಚ್ಚಿನ ಕಾನೂನು ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಈ ಕಾನೂನು ಹಬ್ಬದಲ್ಲಿ 10 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಾ.10ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಸರಕಾರದ ಹೆಚ್ಚುವರಿ ಕಾನೂನು ಕಾರ್ಯದರ್ಶಿ ಎಚ್.ಕೆ. ಜಗದೀಶ್ ಉದ್ಘಾಟಿಸಲಿದ್ದಾರೆ. ಉಜಿರೆಯ ಎಸ್‌ಡಿಎಂಇ ಸೊಸೈಟಿಯ ಕಾರ್ಯದರ್ಶಿ ಬಿ. ಯಶೋವರ್ಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜ್ಯ ವಕೀಲರ ಮಂಡಳಿಯ ಮಾಜಿ ಉಪಾಧ್ಯಕ್ಷ ಸುಭಾಷ್ ಕೌಡಿಚ್ಚಾರ್, ಯೆನೆಪೊಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ಶ್ರೀಕುಮಾರ್ ಮೆನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭವು ಮಾ.12ರಂದು ಅಪರಾಹ್ನ 3:30ಕ್ಕೆ ನಡೆಯಲಿದೆ. ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ನ್ಯಾ. ಅಬ್ದುಲ್ ನಝೀರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಹೈ ಕೋರ್ಟ್‌ನ ನ್ಯಾಯಾಧೀಶರಾದ ನ್ಯಾ. ಎ.ಎಸ್. ಬೋಪಣ್ಣ, ನ್ಯಾ.ಜೆ. ಮೈಕಲ್ ಡಿಕುನ್ಹಾ, ನ್ಯಾ.ಎ. ಎಸ್.ವೇಣುಗೋಪಾಲಗೌಡ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ರಾಜ್ಯ ವಕೀಲರ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಪಿ. ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉತ್ತಯ್ಯ, ಗೌತಮಿ, ಸಂತೋಷ್ ಪ್ರಭು ಉಪಸ್ಥಿತರಿದ್ದರು.