ಮಂಗಳೂರು: ಆರ್‌ಟಿಇ ಸಂಪೂರ್ಣ ಅನುಷ್ಠಾನಗೊಳಿಸಲು ಎಸ್‌ಐಒ ಆಗ್ರಹ
ಮಂಗಳೂರು, ಮಾ.9: ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು 7 ವರ್ಷ ಕಳೆದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಸರಕಾರವು ಶಿಕ್ಷಣ ಹಕ್ಕು ಕಾಯ್ದೆಯ 39 ವಿಧಿಗಳ ಪೈಕಿ ಕೇವಲ ಒಂದು ವಿಧಿಯಾಗಿರುವ ಖಾಸಗಿ ಸಂಸ್ಥೆಗಳಲ್ಲಿ ಬಡ ವಿದಾರ್ಥಿಗಳಿಗೆ ಮೀಸಲಾತಿ ನೀಡುವುದನ್ನು ಪ್ರಚಾರ ಪಡಿಸಿದೆ. ಇನ್ನುಳಿದ ಕಾಯ್ದೆಗಳನ್ನು ಜಾರಿಗೆ ತರಲು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ) ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಎಸ್‌ಐಒ ರಾಜ್ಯಾಧ್ಯಕ್ಷ ರಫೀಕ್ ಬೀದರ್, ಆರ್‌ಟಿಇ ಕಾಯ್ದೆಯ ಒಂದು ವಿಧಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಮೀಸಲಾತಿಯನ್ನು ಸಮರ್ಪಕವಾಗಿ ನೀಡಬೇಕು. ಇನ್ನುಳಿದ 38 ವಿಧಿಗಳ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗಕ್ಕೆ ಅಡ್ಡಿ ಬರುವುದನ್ನು ಸರಕಾರವು ಗಮನ ಹರಿಸಿಲ್ಲ ಎಂದು ಹೇಳಿದರು.
ಕಳೆದ ವರ್ಷ ರಾಜ್ಯದಲ್ಲಿ ಸುಮಾರು 2,959 ಶಾಲೆಗಳನ್ನು ಮುಚ್ಚಲಾಗಿದೆ. ಸುಮಾರು 2,168 ಶಾಲೆಗಳನ್ನು 'ಸಂಯುಕ್ತ' ದ ಹೆಸರಿನಲ್ಲಿ ಮುಚ್ಚಲಾಗಿದೆ. ಹೀಗೆ ಒಟ್ಟು 5,227 ಶಾಲೆಗಳನ್ನು ಮುಚ್ಚಲಾಗಿದೆ. ಆರ್‌ಟಿಇ ಪ್ರಕಾರ ಯಾವುದೇ ಮಗು ತನ್ನ ಪ್ರಾಥಮಿಕ ಶಿಕ್ಷಣದವರೆಗೆ ಬೋರ್ಡ್ ಪರೀಕ್ಷೆಯನ್ನು ಬರೆಯುವಂತಿಲ್ಲ ಎಂದು ಕಾನೂನಿದೆ. ಆದರೂ ರಾಜ್ಯ ಸರಕಾರ 4ನೆ ಮತ್ತು 6ನೆ ತರಗತಿಗೆ ಬೋರ್ಡನ್ನಿಡುವ ಮೂಲಕ ವಿದ್ಯಾರ್ಥಿಗಳನ್ನು ಫೇಲ್ ಮಾಡಲು ಹೊರಟಿರುವುದು ಖಂಡನೀಯ ಎಂದರು.
ಪ್ರತೀ ಆರ್‌ಟಿಇ ಸೀಟಿಗೆ 4,152 ರೂ.ಮತ್ತು ಪ್ರತೀ ಎಲ್‌ಕೆಜಿ ಸೀಟಿಗೆ 2,076 ರೂ.ವನ್ನು ಹೆಚ್ಚಿಸಿರುವುದು ಖಂಡನೀಯ. 2015ರಲ್ಲಿ 1,11,329 ಆರ್‌ಟಿಇ ಸೀಟುಗಳಿಗೆ ಸುಮಾರು 131 ಕೋಟಿ ರೂ. ವ್ಯಯಿಸಲಾಗಿದೆ. ಇದೀಗ 46 ಕೋಟಿ ರೂ.ವನ್ನು ಹೆಚ್ಚಿಸಿದೆ. ಸರಕಾರಿ ಶಾಲೆಗಳಾದ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲಾಗುತ್ತಿರುವ 12,000 ರೂ. ಶಾಲಾ ಅನುದಾನವನ್ನು ಮತ್ತು 15,000 ರೂ. ಶಾಲಾ ನಿರ್ವಹಣಾ ವೆಚ್ಚವನ್ನು ಕೆಲವು ವರ್ಷಗಳಿಂದ ಹೆಚ್ಚಿಸಿಲ್ಲ. ಸರಕಾರವು ಕೂಡಲೇ 46 ಕೋಟಿ ರೂ.ವನ್ನು ಸರಕಾರಿ ಶಾಲೆಗೆ ನೀಡಬೇಕು. ಸರಕಾರಿ ಶಾಲೆಗಳಲ್ಲಿ ಕೊರತೆಯಿರುವ 22,000 ಶಿಕ್ಷಕರನ್ನು ಭರ್ತಿ ಮಾಡಿಲ್ಲ ಎಂದರು.
ಆರ್‌ಟಿಇ ಜಾರಿಗೆ ಬಂದು 7 ವರ್ಷವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ನಡೆಸಬೇಕೆಂದು ಅವರು ಎಸ್‌ಐಒ ಆಗ್ರಹಿಸಿದರು.
ಸುದ್ದಗೋಷ್ಠಿಯಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ತಲ್‌ಹ ಇಸ್ಮಾಯೀಲ್ ಕೆ.ಪಿ., ಜಿಲ್ಲಾ ಕಾರ್ಯದರ್ಶಿಗಳಾದ ಆಶಿಕ್ ಹಶಾಶ್, ಮುಬಾರಿಸ್, ಬಾಸಿತ್ ಉಪ್ಪಿನಂಗಡಿ, ನಗರಾಧ್ಯಕ್ಷ ಅಹ್ಮದ್ ಮುಬೀನ್ ಉಪಸ್ಥಿತರಿದ್ದರು.