×
Ad

ಕಾರ್ಮಿಕ ಮುಖಂಡನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ: ಶಿರ್ತಾಡಿ ಗ್ರಾಪಂ ಅಧ್ಯಕ್ಷೆ ರಾಜೀನಾಮೆಗೆ ಸುದತ್ತ ಜೈನ್ ಒತ್ತಾಯ

Update: 2017-03-09 22:28 IST

ಮೂಡುಬಿದಿರೆ, ಮಾ.9: ಕಾರ್ಮಿಕ ಹಾಗೂ ಸಾಮಾಜಿಕ ಹೋರಾಟಗಾರ, ಅಖಿಲ ಭಾರತ ಕಾರ್ಮಿಕ ಸಂಘದ ಸಂಘಟನಾ ಕಾರ್ಯದರ್ಶಿ ಸುದತ್ತ ಜೈನ್ ಶಿರ್ತಾಡಿ ವಿವಿದ ಬೇಡಿಕೆಗಳಿಗೆ ಆಗ್ರಹಿಸಿ ಮತ್ತು ಶಿರ್ತಾಡಿ ಗ್ರಾಮ ಪಂಚಾಯಿತಿ ವಿರುದ್ದ ಪಂಚಾಯಿತಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಬುಧವಾರ ಪ್ರಾರಂಭಿಸಿದ್ದಾರೆ.

ಶಿರ್ತಾಡಿ ಗ್ರಾ ಪಂ ಅಧ್ಯಕ್ಷೆ ಪ್ರತಿಭಟನೆ ನಡೆಸಲು ಗ್ರಾಮ ಪಂಚಾಯಿತಿ ಅನುಮತಿ ಪಡೆಯಬೇಕೆಂಬ ನಿರ್ಣಯ ಮಾಡಿದ್ದನ್ನು ವಿರೋಧಿಸಿದ್ದ ಇವರು ಈ ಕ್ರಮದ ವಿರುದ್ದ ಅನುಮತಿ ಪಡೆಯದೆ ಪಂಚಾಯಿತಿ ಎದುರು ಸತ್ಯಾಗ್ರಹ ನಡೆಸುತ್ತಿದ್ದಾರೆ.

 ವಾರ್ತಾಭಾರತಿಯೊಂದಿಗೆ ಮಾತನಾಡಿದ ಸುದತ್ತ ಜೈನ್, ಸತ್ಯಾಗ್ರಹ ನಡೆಸಲು ಪಂಚಾಯತ್ ಅನುಮತಿ ಕಡ್ಡಾಯ ಪಡೆಯತಕ್ಕದ್ದು ಎಂದು ಪ್ರಸ್ತುತ ಅಧ್ಯಕ್ಷೆ ಲತಾ ಹೆಗ್ಡೆ ಅವರ ಅದೇಶ ಮತ್ತು ಅನುಮತಿ ಮೇರೆಗೆ ಇನ್ನಿತರ ವಿಚಾರಗಳಲ್ಲಿ ನಿರ್ಣಯ ಮಾಡಿರುವುದು ಸಂವಿಧಾನದ ಉಲ್ಲಂಘನೆ ಆಗಿದೆ. ಈ ಹಿನ್ನಲೆಯಲ್ಲಿ ಪಂಚಾಯತ್‌ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ನೀಡುವ ಅರ್ಜಿ ಇದ್ದರೆ ಅದನ್ನು ಭರ್ತಿ ಮಾಡಲು ನಮಗೆ ನೀಡಲಿಎಂದರು.

 ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಯಾರದ್ದೇ ಅನುಮತಿ ಅಗತ್ಯವಿಲ್ಲ. ಪ್ರತಿಭಟನೆ ಅಥವಾ ಸತ್ಯಾಗ್ರಹ ನಡೆಸಲು ನಮ್ಮ ಸಂವಿಧಾನದಲ್ಲಿ ಮುಕ್ತ ಸ್ವಾತಂತ್ರ್ಯ ಇದೆ. ಅದನ್ನು ಉಲ್ಲಂಘಿಸುವ ವ್ಯರ್ಥ ಪ್ರಯತ್ನ ಯಾರೂ ಮಾಡುವುದು ಬೇಡ. ಅಖಿಲ ಭಾರತ ಕಾರ್ಮಿಕ ಸಂಘ ಸಾರ್ವಜನಿಕ ಹಿತಾಸಕ್ತಿಯಿಂದ ಕಾರ್ಮಿಕರ ಬೇಡಿಕೆಯನ್ನ ಈಡೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ವಿವಿಧ ಇಲಾಖೆಗಗಳು ಜಿಲ್ಲಾಧಿಕಾರಿಗಳ ಅದೇಶವನ್ನ ಉಲ್ಲಂಘಿಸಿ ಬೇಡಿಕೆಯನ್ನು ಈಗಾಗಲೇ ನಿರ್ಲಕ್ಷ್ಯ ಮಾಡಿರುವುದು ಈ ಸತ್ಯಾಗ್ರಹ ಆರಂಭಿಸಲು ಕಾರಣವಾಗಿದೆ.ಸಮಾಜದ ಹಿತ ಬಯಸುವವರು ನಾವು, ಸಂವಿಧಾನ ಬದ್ಧವಾಗಿ ಪ್ರತಿಭಟನೆ ಮಾಡುವ ಹಕ್ಕು ನಮಗಿದೆ. ಲತಾ ಹೆಗ್ಡೆಯವರು ಆಡಳಿತಾತ್ಮಕವಾಗಿ ಸಂವಿಧಾನದ ಉಲ್ಲಂಘನೆ ಮಾಡಿರುವುದರಿಂದ ರಾಜಿನಾಮೆ ನೀಡಬೇಕು. ಸಂವಿಧಾನ ಉಲ್ಲಂಘನೆ ಮಾಡಿರುವುದರಿಂದ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಬೇಕು.ಎಂದಿದ್ದಾರೆ.

ಸತ್ಯಾಗ್ರಹವನ್ನು ತೆಂಗಿನಕಾಯಿ ಒಡೆಯುವುದರ ಮೂಲಕ ಆರಂಭಿಸಲಾಯಿತು. ತಾ.ಪಂ. ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಸ್. ಪಾಂಡ್ರು ಉಪಸ್ಥಿತರಿದ್ದರು.

ಬುಧವಾರ ಆರಂಭಗೊಂಡ ಈ ಉಪವಾಸ ಗುರುವಾರ ಪರ್ಯಂತ ಮುಂದುವರಿದಿದ್ದು, ಅವರು ಇದುವರೆಗೆ ಬರೇ ನೀರು ಮಾತ್ರ ಸೇವನೆ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News