×
Ad

ಮಂಗಳೂರು: ನೂತನ ಮೇಯರ್ ಪಧವೀಧರೆ, ಕರಾಟೆಪಟು!

Update: 2017-03-09 22:33 IST

ಮಂಗಳೂರು, ಮಾ.9: ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕವಿತಾ ಸನಿಲ್ ಕರಾಟೆ ಪಟುವಾಗಿದ್ದು, ಬಿಕಾಂ ಪದವೀಧರೆ. ಕಳೆದ ಸಾಲಿನಲ್ಲಿ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿದ್ದು, ಪರವಾನಿಗೆ ರಹಿತ ಅಂಗಡಿಗಳಿಗೆ ದಾಳಿ ನಡೆಸುವ ದಿಟ್ಟ ಹೆಜ್ಜೆಯ ಮೂಲಕ ಗಮನ ಸೆಳೆದಿದ್ದರು.

ಮಾ.10ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕವಿತಾ ಇಂದು ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಹುಟ್ಟುಹಬ್ಬಕ್ಕೆ ಮುನ್ನಾ ದಿನ ಕೊಡುಗೆ ದೊರಕಿದಂತಾಗಿದೆ. ಕವಿತಾ ಸನಿಲ್ ಕರಾಟೆ ಹಾಗೂ ಪವರ್‌ಲಿಪ್ಟಿಂಗ್‌ನಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು.

1992ರಿಂದ 2008ರವರೆಗೆ ಕರಾಟೆಯಲ್ಲಿ ರಾಷ್ಟ್ರೀಯ ಪದಕಗಳನ್ನು ಪಡೆದಿದ್ದಾರೆ. ಅವರು ಒಟ್ಟು 58 ಚಿನ್ನದ ಪದಕ, 18 ಬೆಳ್ಳಿಯ ಪದಕಗಳನ್ನು ಪಡೆದುಕೊಂಡಿದ್ದಾರೆ. ಭಾರತೀಯ ಕರಾಟೆ ಹಾಗೂ ಬುಡೋಕೋನ್ ಕರಾಟೆಯಲ್ಲಿ 2 ಸಲ ಬ್ಲ್ಯಾಕ್ ಬೆಲ್ಟ್ ಪಡೆದ ಏಕೈಕ ಮಹಿಳಾ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

1999ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಕರಾಟೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದಿದ್ದಾರೆ. ಭೋಪಾಲ್ ಸೇರಿದಂತೆ ದೇಶ ವಿದೇಶದಲ್ಲೂ ಪವರ್‌ಲಿಪ್ಟಿಂಗ್‌ನ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇವರ ಕ್ರೀಡಾ ಸಾಧನೆ ಪರಿಗಣಿಸಿ 2004ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ದೊರಕಿತ್ತು.

ಬಿಕಾಂ ಪದವೀಧರೆಯಾಗಿರುವ ಕವಿತಾ 2002ರಲ್ಲಿ ಮರಕಡ ಕ್ಷೇತ್ರದಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು. ಬಳಿಕದ ಚುನಾವಣೆಯಲ್ಲಿ 14 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿ ಪಚ್ಚನಾಡಿ ಕ್ಷೇತ್ರದಿಂದ ಸ್ಪರ್ಧಿಸಿ 580 ಮತಗಳ ಅಂತರದಿಂದ ಅವರು ಜಯ ಗಳಿಸಿದ್ದರು. ಪ್ರಸ್ತುತ ರಾಜ್ಯ ಮಹಿಳಾ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ ಅವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಉಪ ಮೇಯರ್ ಆಗಿ ಆಯ್ಕೆಯಾಗಿರುವ ದೇರೆಬೈಲ್ ದಕ್ಷಿಣ ವಾರ್ಡ್‌ನ ರಜನೀಶ್‌ರವರು ಕೂಡಾ ಬಿಕಾಂ ಪದವೀಧರರು. ಱಸ್ಮಾರ್ಟ್ ವಾರ್ಡ್‌ೞ ರೂಪಿಸುವ ಮೂಲಕ ಗಮನ ಸೆಳೆದಿದ್ದರು. ಪರಿಸರ ಪೂರಕ ವಿವಿಧ ಕಾರ್ಯಕ್ರಮಗಳನ್ನು ಅವರು ತಮ್ಮ ವಾರ್ಡ್‌ನಲ್ಲಿ ಅನುಷ್ಠಾನಿಸಿದ್ದರು.

ತಡರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: 

 ಪ್ರಸಕ್ತ ಸಾಲಿನ ಮೇಯರ್ ಗಾದಿಯು ಸಾಮಾನ್ಯ ಮಹಿಳೆಗೆ ಮೀಸಲಾದ ಹಿನ್ನೆಲೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ನಲ್ಲಿ ಮೇಯರ್ ಅಭ್ಯರ್ಥಿಯ ಆಯ್ಕೆ ಚುನಾವಣಾ ಮುನ್ನಾ ದಿನದ ತಡರಾತ್ರಿವರೆಗೂ ಕಗ್ಗಂಟಾಗಿ ಪರಿಣಮಿಸಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮೇಯರ್ ಅಭ್ಯರ್ಥಿ ಕುರಿತು ಬುಧವಾರ ರಾತ್ರಿ ಸುದೀರ್ಘ ಹೊತ್ತು ಅಭಿಪ್ರಾಯ ಆಲಿಸಿ, ಕೆಪಿಸಿಸಿ ವಕ್ತಾರರು ಹಾಗೂ ಶಾಸಕರ ಜತೆಗೆ ಮಾತುಕತೆ ನಡೆಸಿದರು. ಈ ಬಾರಿ ಮೊದಲ ಬಾರಿ ಎಂಬಂತೆ ಕಾಂಗ್ರೆಸ್ ಕಾರ್ಪೊರೇಟರ್‌ಗಳ ಮಧ್ಯೆ ಕಾಂಗ್ರೆಸ್ ಮುಖಂಡರ ಉಪಸ್ಥಿತಿಯಲ್ಲಿ ಆಂತರಿಕ ರಹಸ್ಯ ಮತದಾನ ಮಾಡಲಾಯಿತು.

ಇದರಲ್ಲಿ ಅಧಿಕ ಮತ ಪಡೆದ ಕವಿತಾ ಸನಿಲ್ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಬಳಿಕ ಉಪಮೇಯರ್ ಹಾಗೂ ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News