ಮನ್ ಕಿ ಬಾತ್ ನಿಲ್ಲಿಸಿ, ಕೆಲಸಕ್ಕೆ ಬರುವ ಮಾತುಗನ್ನಾಡಿ: ವಿ.ಕುಕ್ಯಾನ್

Update: 2017-03-10 10:08 GMT

ಮಂಗಳೂರು, ಮಾ.10: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ನಿಲ್ಲಿಸಿ ಕೆಲಸಕ್ಕೆ ಬರುವ ಮಾತುಗಳನ್ನಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಹೇಳಿದ್ದಾರೆ.

ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ, ಜನಪರ ರಾಜ್ಯ ಬಜೆಟ್ ಗೆ ಒತ್ತಾಯಿಸಿ ಸಿಪಿಐ ನೇತೃತ್ವದಲ್ಲಿ ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ನಡೆದ ರಾಜ್ಯವ್ಯಾಪಿ ಜನಾಗ್ರಹ ಚಳವಳಿಯಲ್ಲಿ ಅವರು ಮಾತನಾಡುತ್ತಿದ್ದರು.

‘ಅಚ್ಛೆ ದಿನ್ ಆಯೆಗಾ’ ಎಂದು ಜನರನ್ನು ಕನಸಲ್ಲಿ ತೇಲಾಡಿಸಿ ಬಂಡವಾಳಶಾಹಿ ಪರ ವಿದೇಶಿ ನೀತಿಗಳನ್ನು ಅನುಸರಿಸಿ ದೇಶಿವಾಸಿಗಳಲ್ಲಿ ಸುಳ್ಳು ಹಬ್ಬಿಸಲಾಗುತ್ತಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಏರುತ್ತಿದೆ. ನಿತ್ಯೋಪಯೋಗಿ ವಸ್ತುಗಳು ಜನರಿಗೆ ಕೈಗೆಟುಕದೆ ದುಬಾರಿಯಾಗುತ್ತಿವೆ. ಜಾತಿ-ಮತದ ಹೆಸರಿನಲ್ಲಿ ದೇಶವನ್ನು ಒಡೆಯುವ ಸಂಚು ರೂಪಿಸಲಾಗುತ್ತಿದೆ. ಕಾರ್ಮಿಕರ, ಜನರ ಮೂಲಭೂತ ಬೇಡಿಕೆಗಳ ಬಗ್ಗೆ ಗಮನಹರಿಸಲು ಪ್ರಧಾನ ಮಂತ್ರಿಯವರಿಗೆ ಸಮಯವಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿ ಜನರನ್ನು ತೇಲಾಡಿಸುತ್ತಿದ್ದಾರೆ ಎಂದು ಆಪಾದಿಸಿದರು.

ಸಿಪಿಐ ಜಿಲ್ಲಾ ಸಹಾಯಕ ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿದರು.

 
ಮಂಗಳೂರು ತಾಲೂಕು ಕಾರ್ಯದರ್ಶಿ ವಿ.ಎಸ್.ಬೇರಿಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಕುಮಾರ್ ವಂದಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಎಚ್.ವಿ.ರಾವ್, ಎ.ಪಿ.ರಾವ್, ಆರ್.ಡಿ. ಸೋನ್ಸ್, ಭಾರತಿ ಪ್ರಶಾಂತ್, ಎಂ.ಕರುಣಾಕರ್, ಬಾಬು ಭಂಡಾರಿ, ಶಿವಪ್ಪಕೋಟ್ಯಾನ್, ಸುಲೋಚನಾ ಹರೀಶ್, ಚಿತ್ರಾಕ್ಷಿ, ಸುಧಾಕರ್, ಸರಸ್ವತಿ, ವಸಂತಿ ಶೆಟ್ಟಿ, ಕೆ.ಈಶ್ವರ್ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News