×
Ad

ನಿಟ್ಟೆ: ರಾಷ್ಟ್ರಮಟ್ಟದ ವಾರ್ಷಿಕ ತಂತ್ರಜ್ಞಾನ - ಸಾಂಸ್ಕೃತಿಕ ಹಬ್ಬ 'ಅನಾದ್ಯಂತ' ಉದ್ಘಾಟನೆ

Update: 2017-03-10 18:59 IST

ನಿಟ್ಟೆ, ಮಾ.10: ಬದುಕಿನ ಸಂಕಷ್ಟಗಳನ್ನು ಸ್ಥೈರ್ಯದಿಂದ ಎದುರಿಸಲು ಅಗತ್ಯವಿರುವ ಅನುಭವ ಪಡೆಯಲು ಕಾಲೇಜುಗಳು ನಿಜವಾದ ಕಲಿಕೆಯ ತಾಣಗಳು. ಬೋಧಕರು ಬದುಕಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಮಣಿಪಾಲ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ ಹೇಳಿದರು. 

ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ವಾರ್ಷಿಕ ತಂತ್ರಜ್ಞಾನ - ಸಾಂಸ್ಕೃತಿಕ ಹಬ್ಬ ಅನಾದ್ಯಂತದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರ.

ಚಿತ್ರನಟ, ರಾಕಿಂಗ್‌ಸ್ಟಾರ್ ಯಶ್ ಮಾತನಾಡಿ, ಯುವಜನತೆ ತಮ್ಮ ಕುಟುಂಬವನ್ನು ಗೌರವಿಸಬೇಕು. ಆರೋಗ್ಯಕರ ಸ್ಪರ್ಧೆಯನ್ನು ಸ್ಥೈರ್ಯದಿಂದ ಎದುರಿಸಬೇಕು ಹಾಗೂ ಜವಾಬ್ದಾರಿಯಿಂದ ಸಮಾಜದ ಸಮಸ್ಯೆಗಳ ಬಗ್ಗೆ ಜೀವಂತ ಕಳಕಳಿ ಹೊಂದಬೇಕು ಎಂದು ಕರೆ ನೀಡಿದರು.

ಅಲ್ಲದೆ ತಮ್ಮ  'ಯಶೋಮಾರ್ಗ' ಸಂಘಟನೆಯ ಮುಖಾಂತರ ಕೈಗೊಂಡಿರುವ ಕೆರೆಗಳ ಪುನರುಜ್ಜೀವನ ಕಾರ್ಯಕ್ಕೆ ಸಕಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದಂತಹ ಸಾಮಾಜಿಕ ಕಾಳಜಿ ಹೊಂದಿದ ಸಂಸ್ಥೆ. ಒಂದಾದರೂ ಸನಿಹದ ಕೆರೆಯನ್ನು ದತ್ತು ತೆಗೆದುಕೊಳ್ಳಲಿ ಎಂಬ ಯಶ್ ಅವರ ಸಲಹೆಯನ್ನು ಸಂಸ್ಥೆಯ ಆಡಳಿತ ಮಂಡಳಿ ತತ್‌ಕ್ಷಣ ಸ್ವೀಕರಿಸಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಭರವಸೆ ನೀಡಿತು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅವರು ಮಾತನಾಡಿ, ಯುವಜನತೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ನಮ್ಮ ದೇಶ ಇಡೀ ಜಗತ್ತಿನಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತದೆ, ಎಂದರು.
 

ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಆಡಳಿತಾಧಿಕಾರಿ ರೋಹಿತ್ ಪುಂಜ, ಹಿರಿಯ ವಿಜ್ಞಾನಿ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ವಿದ್ಯಾಲಯದ ಸಲಹೆಗಾರ ಪ್ರೊ. ಎಲ್.ಎಂ. ಪಟ್ನಾಯಕ್ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಶ್ರೀಮತಿ ಸುಧಾರಾವ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News