ಏಕಕಾಲದ ಪಾವತಿ ಮೂಲಕ ಇತ್ಯರ್ಥಕ್ಕೆ ಸಿದ್ಧ: ವಿಜಯ್ ಮಲ್ಯ

Update: 2017-03-10 14:05 GMT

ಹೊಸದಿಲ್ಲಿ, ಮಾ.10: ಬ್ಯಾಂಕ್‌ಗಳಿಗೆ ಪಾವತಿಗೆ ಬಾಕಿ ಇರುವ 9 ಸಾವಿರ ಕೋಟಿ ರೂಪಾಯಿಯನ್ನು ಒಂದೇ ಅವಧಿಯಲ್ಲಿ ಪಾವತಿಸಿ ಇತ್ಯರ್ಥ ಮಾಡಿಕೊಳ್ಳಲು ಸಿದ್ದ ಎಂದು ಉದ್ಯಮಿ ವಿಜಯ್ ಮಲ್ಯ ಟ್ವಿಟರ್ ಸಂದೇಶದಲ್ಲಿ ತಿಳಿಸಿದ್ದಾರೆ.

 ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸಾಲವನ್ನು ಏಕಕಾಲದ ಪಾವತಿ ಮೂಲಕ ಇತ್ಯರ್ಥಗೊಳಿಸುವ ವ್ಯವಸ್ಥೆಯಿದೆ. ನೂರಾರು ಸಾಲಗಾರರು ಈ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆ. ಹಾಗಿರುವಾಗ ನಮಗೆ ಮಾತ್ರ ಯಾಕೆ ನಿರಾಕರಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಎದುರು ನಾವು ಮಂಡಿಸಿದ ಗಮನಾರ್ಹ ಪ್ರಸ್ತಾಪವನ್ನು ಬ್ಯಾಂಕ್‌ಗಳು ಪರಿಗಣನೆಗೇ ತೆಗೆದುಕೊಳ್ಳದೆ ತಳ್ಳಿಹಾಕಿವೆ. ನಾನು ಯುಕ್ತವಾದ ರೀತಿಯ ಮೂಲಕ ಇತ್ಯರ್ಥಗೊಳಿಸಲು ಮಾತುಕತೆಗೆ ಸಿದ್ಧ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಇಬ್ಬರ ಮಧ್ಯೆ ಮಾತುಕತೆ ನಡೆಯುವಂತೆ ಸೂಚಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂಬುದು ನನ್ನ ಆಶಯವಾಗಿದೆ. ನಾವು ಸಿದ್ಧರಿದ್ದೇವೆ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

    ನ್ಯಾಯಾಲಯ ಹೊರಡಿಸಿದ ಪ್ರತಿಯೊಂದು ಆದೇಶವನ್ನೂ ಯಾವುದೇ ಆಕ್ಷೇಪಣೆಯಿಲ್ಲದೆ ವಿನೀತನಾಗಿ ಪಾಲಿಸಿದ್ದೇನೆ. ಆದರೆ ಸರಕಾರ ಯಾವುದೇ ಸೂಕ್ತವಾದ ವಿಚಾರಣೆಯಿಲ್ಲದೆ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನಿರ್ಧರಿಸಿದಂತೆ ಕಾಣುತ್ತದೆ . ನನ್ನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ಮಾಡಿರುವ ಆರೋಪಗಳು ಸರಕಾರ ನನ್ನ ಬಗ್ಗೆ ಹೊಂದಿರುವ ಧೋರಣೆಯ ಸ್ಪಷ್ಟ ಉದಾಹರಣೆಯಾಗಿದೆ ಎಂದವರು ದೂರಿದರು. ಮಲ್ಯ ಘೋಷಿಸಿಕೊಂಡಿರುವ ಆಸ್ತಿಯ ವೌಲ್ಯದ ಸತ್ಯಾಂಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, 40 ಮಿಲಿಯನ್ ಡಾಲರ್ ನಿಧಿಯನ್ನು ತನ್ನ ಮಕ್ಕಳ ಹೆಸರಿಗೆ ವರ್ಗಾಯಿಸಿರುವ ಕ್ರಮವನ್ನು ಪ್ರಶ್ನಿಸಿತ್ತು. ಮಲ್ಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಮತ್ತು ಡಿಯಾಗಿಯೊ ಎಂಬ ಸಾಗರೋತ್ತರ ಸಂಸ್ಥೆಯಿಂದ ಪಡೆದಿರುವ 40 ಮಿಲಿಯನ್ ಡಾಲರ್ ಮೊತ್ತವನ್ನು ಠೇವಣಿ ಇರಿಸಲು ಮಲ್ಯಗೆ ಸೂಚಿಸಬೇಕು ಎಂದು ಕೋರಿ ಬ್ಯಾಂಕ್‌ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ

 ವಿಭಾಗೀಯ ಪೀಠವೊಂದು, ತನ್ನ ಆದೇಶವನ್ನು ಕಾಯ್ದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News