ಕುಡಿಯುವ ನೀರಿಗೆ ತೊಂದರೆಯಾಗಬಾರದು: ಶಾಸಕ ಜೆ.ಆರ್.ಲೋಬೊ ಎಚ್ಚರಿಕೆ
ಮಂಗಳೂರು, ಮಾ.10: ನಗರದಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ವಿಚಾರಗಳ ಕುರಿತು ಶಾಸಕ ಜೆ.ಆರ್.ಲೋಬೊ ಗುರುವಾರ ತನ್ನ ಕಚೇರಿಯಲ್ಲಿ ನೀರಿನ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದರು.
ಮಹಾನಗರ ಪಾಲಿಕೆಯ ಜೆಇಗಳು ಯಾವೆಲ್ಲಾ ಪ್ರದೇಶಗಳಲ್ಲಿ ನೀರಿನ ಬರ ಇದೆ ಎಂಬುದನ್ನು ಅಧ್ಯಯನ ನಡೆಸಿ ಮಂಗಳವಾರ ವರದಿ ಕೊಡುವಂತೆ ತಾಕೀತು ಮಾಡಿದ ಅವರು, ತುಂಬೆಯಿಂದ ನೀರು ಬರದಿದ್ದರೆ ಬದಲಿ ಕ್ರಮ ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಅಧ್ಯಯನ ನಡೆಸಿ ಪರಿಹಾರ ಕ್ರಮಗಳ ಕುರಿತು ತಿಳಿದುಕೊಳ್ಳುವಂತೆ ಸೂಚನೆ ನೀಡಿದರು.
ಮನಪಾ ವ್ಯಾಪ್ತಿಯಲ್ಲಿ 218 ಕೊಳವೆ ಬಾವಿಗಳಿವೆ. ಈ ಪೈಕಿ 154 ಕೊಳವೆ ಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವು ಕೆಟ್ಟಿವೆ. ಇವುಗಳನ್ನು ಸರಿಪಡಿಸಬೇಕಾದರೆ ತಲಾ ಒಂದು ಲಕ್ಷ ರೂ. ಬೇಕಾಗುತ್ತದೆ ಎಂದು ಎಇ ಲಿಂಗೇಗೌಡ ತಿಳಿಸಿದರು.
ಮಂಗಳೂರಲ್ಲಿ ತೆರೆದ ಬಾವಿಗಳು ಎಷ್ಟಿವೆ? ಅವುಗಳ ಸಮಗ್ರ ವರದಿ ಕೊಡಬೇಕು. ಕಳೆದ ವರ್ಷವೂ ತೆರೆದ ಬಾವಿಗಳನ್ನು ಸರಿಪಡಿಸಿ ಹಣ ಖರ್ಚು ಮಾಡಿದ್ದೇವೆ. ಅವುಗಳ ಸ್ಥಿತಿಯ ಬಗ್ಗೆಯೂ ತಿಳಿಸಬೇಕು. ಅಗತ್ಯವಾದರೆ ತೆರೆದ ಬಾವಿಗಳನ್ನೂ ಬಳಸಿಕೊಳ್ಳಲು ಸಿದ್ಧರಾಗಬೇಕು ಎಂದು ಜೆ.ಆರ್.ಲೋಬೊ ತಿಳಿಸಿದರು.
ಕ್ರೆಡೈ ಸಂಸ್ಥೆಯವರು ತುಂಬೆಯ ನೀರನ್ನು ಬಳಸದೆ ನಿರ್ಮಾಣ ಕಾಮಗಾರಿಗಳಿಗೆ ಸ್ವತಂತ್ರವಾಗಿ ನೀರಿನ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಕುಡಿಯುವ ನೀರು ಕೊಡುವುದು ಮುಖ್ಯ. ಈ ಬಗ್ಗೆ ಗಮನ ಹರಿಸುವಂತೆ ಲೋಬೊ ಸೂಚಿಸಿದರು.
ಸಭೆಯಲ್ಲಿ ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.