ಮಂಗಳೂರು: ದರೋಡೆ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಮಂದಿ ಆರೋಪಿಗಳ ಸೆರೆ
ಮಂಗಳೂರು, ಮಾ.10: ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ವ್ಯಕ್ತಿಯೊಬ್ಬರನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಮತ್ತು ಕದ್ರಿ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪೆರ್ಡೂರಿನ ತೌಸಿಫ್ ಯಾನೆ ಮುನ್ನ ಯಾನೆ ಶೈಲು(25), ಮಂಜನಾಡಿಯ ಮುಹಮ್ಮದ್ ಅಬ್ದುಲ್ ಯಾನ್(19), ಉಳ್ಳಾಲ ಧರ್ಮನಗರದ ಅಬ್ದುಲ್ ಸ್ವಾನ್ (22), ಬಜಾಲ್‌ಪಡ್ಪು ನಿವಾಸಿ ಮುಹಮ್ಮದ್ ಆರೀಫ್ (31) ಬಂಧಿತರು. ಈ ಆರೋಪಿಗಳು ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಮಾ.4ರಂದು ರಾತ್ರಿ ಕುಲಶೇಖರ ಬಳಿಯ ಲಾನ್ಸಿ ಸಿರಿಲ್ ಲೋಬೊ ಎಂಬವರು ನಗರದ ಕೆಪಿಟಿ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ನಿಂತಿದ್ದ ವೇಳೆ ಅಲ್ಲಿಗೆ ಮಾರುತಿ ಅಲ್ಟೋ ಕಾರಿನಲ್ಲಿ ಬಂದ 5 ಮಂದಿಯ ತಂಡ ಸಿರಿಲ್ ಲೋಬೊಗೆ ಹಲ್ಲೆ ನಡೆಸಿ ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿತ್ತು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೌಸಿಫ್ ಎಂಬಾತನ ವಿರುದ್ಧ 2013ರಲ್ಲಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುಹಮ್ಮದ್ ಅಬ್ದುಲ್ ಯಾನ್ ಎಂಬಾತನ ವಿರುದ್ಧ ಈ ಹಿಂದೆ ಬಂದರ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಕೊಟ್ಟ ಪ್ರಕರಣ ದಾಖಲಾಗಿದೆ.
ಅಬ್ದುಲ್ ಸ್ವಾನ್‌ನ ವಿರುದ್ಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಹಾಗೂ ಮುಹಮ್ಮದ್ ಅರೀಫ್ ವಿರುದ್ಧ ಪಾಂಡೇಶ್ವರ, ಉರ್ವ, ಬರ್ಕೆ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಸಂಬಂಧಿಸಿ 3 ಪ್ರಕರಣಗಳು ದಾಖಲಾಗಿವೆ.
ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಸುನೀಲ್ ವೈ. ನಾಯ್ಕೆ ನೇತೃತ್ವದ ತಂಡ ಮತ್ತು ಕದ್ರಿ ಠಾಣಾ ಇನ್‌ಸ್ಪೆಕ್ಟರ್ ಮಾರುತಿ ಜಿ. ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.