55 ಸಾವಿರ ಹಳ್ಳಿಗಳು ಮೊಬೈಲ್ ಸಂಪರ್ಕ ವಂಚಿತ
ಹೊಸದಿಲ್ಲಿ, ಮಾ.10: ದೇಶದಲ್ಲಿ ಕನಿಷ್ಠ 55 ಸಾವಿರ ಹಳ್ಳಿಗಳು ಮೊಬೈಲ್ ಸಂಪರ್ಕದಿಂದ ವಂಚಿತವಾಗಿದ್ದು ಮೊಬೈಲ್ ಸಂಪರ್ಕ ವ್ಯವಸ್ಥೆ ಒದಗಿಸಿಕೊಡಲು ಪ್ರಯತ್ನಿಸಲಾಗುತ್ತಿದೆ ಎಂದು ಸರಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಮಾಹಿತಿ ಇಲಾಖೆಯ ಸಹಾಯಕ ಸಚಿವ ಮನೋಜ್ ಸಿನ್ಹ, ಮೊಬೈಲ್ ಸಂಪರ್ಕ ಇಲ್ಲದ ಹಳ್ಳಿಗಳ ಮಾಹಿತಿ ನೀಡುವಂತೆ ಎಲ್ಲಾ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ.
ಈ ನಿಟ್ಟಿನಲ್ಲಿ ಸರಕಾರ ಯೋಜನೆ ರೂಪಿಸಿದ್ದು , ವಿಶೇಷವಾಗಿ ಎಡಪಂಥೀಯ ಉಗ್ರವಾದಿಗಳಿಂದ ಪೀಡಿತ ಪ್ರದೇಶದಲ್ಲಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಮೊಬೈಲ್ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದವರು ಹೇಳಿದರು.
ಮಾವೋವಾದಿ ನಕ್ಸಲರ ಹಿಂಸಾಚಾರದಿಂದ ಮೊಬೈಲ್ ಟವರ್ ನಾಶಗೊಂಡಿದೆ ಎಂದು ಕಾಂಗ್ರೆಸ್‌ನ ರೇಣುಕಾ ಚೌಧುರಿ ತಿಳಿಸಿದಾಗ, ಈ ಬಗ್ಗೆ ವಿವರಣೆ ಪಡೆಯಲಾಗುವುದು ಮತ್ತು ಈ ರೀತಿಯ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುವುದು ಎಂದು ಭರವಸೆ ನೀಡಿದರು.