ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್
ಉಡುಪಿ, ಮಾ.10: ಉಡುಪಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕೆಂದು ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೃಷಿ ಇಲಾಖೆ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಕಂದಾಯ ಇಲಾಖೆ ಕಾರ್ಯಕ್ರಮ ಹಾಗೂ ಇತರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ನೀರಿನ ಅಭಾವ ಎದುರಿಸಲು ಕೈಗೊಂಡಿರುವ ಪರಿಹಾರ ಕ್ರಮದ ಬಗ್ಗೆ ಮಹೇಶ್ವರ ರಾವ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಬೇಕಾದ ಅಗತ್ಯಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇನ್ನೂ ಟ್ಯಾಂಕರ್ ಮೂಲಕ ನೀರು ನೀಡಲು ಆರಂಭಿಸಿಲ್ಲ ಎಂದು ನಗರಸಭೆ, ನಗರಾಡಳಿತ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಾಗಿ ನೀರಿನ ಅಭಾವ ತಲೆದೋರ ಲಿದ್ದು, ನಗರಸಭಾ ವ್ಯಾಪ್ತಿಯಲ್ಲಿ 8 ಬೋರ್‌ವೆಲ್, 9 ತೆರೆದ ಬಾವಿಗಳನ್ನು ನೀರಿಗೋಸ್ಕರ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತರು ತಿಳಿಸಿದರು.
ಅಮೃತ್ ಯೋಜನೆಯಡಿ ಶಿಂಬ್ರಕ್ಕೆ ವೆಂಟೆಡ್ ಡ್ಯಾಂ ನಿರ್ಮಿಸಲು 108 ಕೋಟಿ ರೂ. ಬಿಡುಗಡೆಯಾಗಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ನೀರಿಗೆ ತೊಂದರೆ ಇಲ್ಲ ಎಂದೂ ಅವರು ಮಾಹಿತಿ ನೀಡಿದರು.
ಕುಂದಾಪುರ, ಕಾರ್ಕಳ, ಸಾಲಿಗ್ರಾಮ, ಕಾಪುವಿನಲ್ಲೂ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದರು. ಉಡುಪಿ ನಗರಸಭೆಗೆ 50 ಲಕ್ಷ ರೂ. ಹೆಚ್ಚಿನ ಅನುದಾನವನ್ನು ಆಯುಕ್ತರು ಕೋರಿದರು. ಎಪ್ರಿಲ್-ಮೇ ತಿಂಗಳಲ್ಲಿ ನೀರಿನ ಅಭಾವ ಎದುರಿಸಲು ಸರಕಾರಿ ಜಲಸಂಪನ್ಮೂಲಗಳಲ್ಲದೆ ಖಾಸಗಿ ಬೋರ್‌ವೆಲ್ ಅಥವಾ ಬಾವಿಗಳಿಂದ ಬಾಡಿಗೆ ನೀಡಿ ನೀರು ಪಡೆಯಿರಿ ಎಂದು ಉಸ್ತುವಾರಿ ಕಾರ್ಯದರ್ಶಿ ಸಲಹೆ ನೀಡಿದರು.
ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 131 ಹಳ್ಳಿಗಳಲ್ಲಿ ನೀರಿನ ಕ್ಷಾಮ ವಿರುವುದನ್ನು ಗುರುತಿಸಲಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಗಳು ತಿಳಿಸಿದರು. ಜಿಪಂನ ಪಿಆರ್‌ಇಡಿ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದ ಮಹೇಶ್ವರ ರಾವ್, ಮುಂದಿನ ತಿಂಗಳ ಸಭೆಗೆ ಮುನ್ನ ನಿಗದಿತ ಗುರಿ ಸಾಧಿಸಲು ಆದೇಶಿಸಿದರು.
ನಬಾರ್ಡ್ ಯೋಜನೆಯಡಿ ಕೈಗೊಂಡ ಯೋಜನೆಗಳ ಮಾಹಿತಿ ಹಾಗೂ ಕೈಗೊಳ್ಳಬೇಕಾದ ಯೋಜನೆಗಳ ಅಂದಾಜುಪಟ್ಟಿಯನ್ನು ಜಿಲ್ಲಾಧಿಕಾರಿ ಮೂಲಕ ತಮಗೆ ಸಲ್ಲಿಸಲು ಅವರು ಈ ಸಂದರ್ಭದಲ್ಲಿ ಹೇಳಿದರು.
ಕಡಲ್ಕೊರೆತ ಕಾಮಗಾರಿಗಳಿಗೆ 4 ಕೋಟಿ ರೂ. ಅನುದಾನದಡಿ 87 ತುರ್ತು ಕಾಮಗಾರಿ ಗಳನ್ನು ನಿರ್ವಹಿಸಿದ್ದು, 12 ಕೋಟಿಗೆ ಬೇಡಿಕೆ ಸಲ್ಲಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿ ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಬೀಜೋತ್ಪಾದನೆ ಮಾಡುತ್ತಿರುವ ಖಾಸಗಿ ಕಂಪೆನಿಗಳಿಗೆ ಪ್ರೋತ್ಸಾಹ ನೀಡಲು ಕೃಷಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಡಿಸಿ ಅನುರಾದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.