ಜನಾಂಗೀಯ ದ್ವೇಷದಿಂದ ಸಿಖ್ ಮೇಲೆ ದಾಳಿ: ಪೊಲೀಸ್
ವಾಶಿಂಗ್ಟನ್, ಮಾ. 10: ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ, ಭಾರತೀಯ ಮೂಲದ ಸಿಖ್ ದೀಪ್ ರೈ ಮೇಲೆ ವಾಶಿಂಗ್ಟನ್‌ನಲ್ಲಿರುವ ಅವರ ನಿವಾಸದ ಹೊರಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ಅಪರಾಧಿಯ ಬಗ್ಗೆ ಸುಳಿವು ನೀಡುವವರಿಗೆ 6,000 ಡಾಲರ್ (ಸುಮಾರು 4 ಲಕ್ಷ ರೂಪಾಯಿ) ಬಹುಮಾನ ಘೋಷಿಸಿದ್ದಾರೆ.
ಅಮೆರಿಕದ ಪ್ರಜೆ 39 ವರ್ಷದ ದೀಪ್ ರೈ ಮಾರ್ಚ್ 3ರಂದು ಕೆಂಟ್‌ನಲ್ಲಿರುವ ತನ್ನ ಮನೆಯ ಹೊರಗೆ ತನ್ನ ವಾಹನದ ನಿರ್ವಹಣೆ ಕೆಲಸದಲ್ಲಿ ತೊಡಗಿದ್ದರು. ಆಗ ಅರ್ಧ ಮುಖ ಮುಚ್ಚಿಕೊಂಡ ಅಪರಿಚಿತನೊಬ್ಬ ಅವರ ಸಮೀಪ ಬಂದು ಮೊದಲು ಜಗಳಕ್ಕೆ ನಿಂತನು ಹಾಗೂ ಬಳಿಕ ಕೈಗೆ ಗುಂಡು ಹಾರಿಸಿ ಪರಾರಿಯಾದನು.
‘‘ಜನಾಂಗೀಯ ಕಾರಣಕ್ಕಾಗಿ ಅವರ ಮೇಲೆ ದಾಳಿ ನಡೆಸಲಾಗಿದೆ ಎನ್ನುವುದು ಸಂತ್ರಸ್ತ ನೀಡಿದ ಮಾಹಿತಿಗಳಿಂದ ತಿಳಿಯುತ್ತದೆ’’ ಎಂದು ಕೆಂಟ್ ಪೊಲೀಸ್ ಮುಖ್ಯಸ್ಥ ಕೆನ್ ತಾಮಸ್ ಗುರುವಾರ ಸುದ್ದಿಗಾರರಿಗೆ ಹೇಳಿದರು. ‘‘ದ್ವೇಷಪೂರಿತ ಕೃತ್ಯಗಳನ್ನು ಸಹಿಸಲಾಗುವುದಿಲ್ಲ’’ ಎಂದು ಅವರು ಸ್ಪಷ್ಟಪಡಿಸಿದರು.
ಘಟನೆ ನಡೆದ ಒಂದು ವಾರದ ಬಳಿಕ ಪೊಲೀಸರು ಗುಂಡುಹಾರಿಸಿದಾತನ ನಕ್ಷಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.