×
Ad

ಮೂಡುಬಿದಿರೆ: ಉಪವಾಸ ಸತ್ಯಾಗ್ರಹ ತಾತ್ಕಾಲಿಕ ಹಿಂಪಡೆದ ಸುದತ್ತ ಜೈನ್

Update: 2017-03-10 22:56 IST

ಮೂಡುಬಿದಿರೆ, ಮಾ.10: ಕಳೆದ ಮೂರು ದಿನಗಳಿಂದ ಶಿರ್ತಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಮಿಕ ಮುಖಂಡ, ಅಖಿಲ ಭಾರತ ಕಾರ್ಮಿಕ ಸಂಘದ ಸಂಘಟನಾ ಕಾರ್ಯದರ್ಶಿ ಸುದತ್ತ ಜೈನ್ ಶುಕ್ರವಾರ ರಾತ್ರಿ 8.30ಗೆ ಉಪವಾಸ ತ್ಯಜಿಸಿದರು.

ಮೂರು ದಿನಗಳಿಂದ ಬರೇ ನೀರು ಸೇವಿಸುತ್ತಿದ್ದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಸಂದರ್ಭ ಪೊಲೀಸರು ಹಾಗೂ ಅಧಿಕಾರಿಗಳ ಒತ್ತಡಕ್ಕೆ ಮಣಿದು ವೈದ್ಯಕೀಯ ತಪಾಸಣೆಗೆ ಒಪ್ಪಿಕೊಂಡರು.

ಈ ಸಂದರ್ಭ ಸುದತ್ತ ಅವರ ಆರೋಗ್ಯ ತಪಾಸಣೆ ನಡೆಸಿದ ಶಿರ್ತಾಡಿ ವೈದ್ಯಾಧಿಕಾರಿ ಡಾ ನಸೀಬಾ ಅವರು ಆರೋಗ್ಯದಲ್ಲಿ ಏರುಪೇರಾಗಿದ್ದು, ಅಪಾಯದ ಮಟ್ಟ ತಲುಪಿದೆ ಎಂದು ತಿಳಿಸಿದರು.

ನಂತರ ಶಿರ್ತಾಡಿ ಗ್ರಾ.ಪಂ. ಸದಸ್ಯರಾದ ಪ್ರವೀಣ್ ಕುಮಾರ್, ವಿವಿಯನ್ ಪಿಂಟೋ, ಮಾಜಿ ತಾ.ಪಂ. ಸದಸ್ಯ ರುಕ್ಕಯ್ಯ ಪೂಜಾರಿಯವರು ಒಂದು ತಿಂಗಳೊಳಗೆ ಸುದತ್ತ ಅವರ ಬೇಡಿಕೆಗಳನ್ನು ಈಡೇರಿಸಲು ಪಂಚಾಯತ್‌ನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಅಷ್ಟಕ್ಕೇ ಜಗ್ಗದ ಸುದತ್ತ ಜೈನ್ ತಮ್ಮ ಸತ್ಯಾಗ್ರಹವನ್ನು ಮುಂದುವರಿಸಿದರು.

ಸುದತ್ತ ಅವರ ಆರೋಗ್ಯ ಸ್ಥಿತಿಗತಿ ಗಂಭೀರಕ್ಕೆ ತಿರುಗುವ ಸೂಚನೆಯರಿತು ನಿರಂತರವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪವಾಸ ತ್ಯಜಿಸುವಂತೆ ಒತ್ತಾಯಿಸಿದರು. ನಂತರ ರಾತ್ರಿ 8 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ತಹಸೀಲ್ದಾರ್ ಮುಹಮ್ಮದ್ ಇಸಾಕ್ ಅವರು ಸುದತ್ತ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿ ಕೊನೆಗೂ ಸತ್ಯಾಗ್ರಹ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭ ಸುದತ್ತ ಅವರ ಬೇಡಿಕೆಗಳಲ್ಲಿ ಒಂದಾಗಿದ್ದ ಕೊಣಾಜೆ ಕಲ್ಲು ಸಿದ್ಧಾಶ್ರಮಕ್ಕೆ ನೀಡಲಾಗಿದ್ದ ಡೋರ್ ನಂಬರ್ ಅನ್ನು ವಾಪಾಸು ಪಡೆದು ಈ ಜಾಗವನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು ಎಂಬುದನ್ನು ಒಪ್ಪಿಕೊಂಡ ಇಸಾಕ್ ಅವರು ಒಂದು ತಿಂಗಳೊಳಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರೆಂದು ಸುದತ್ತ ಹೇಳಿದ್ದಾರೆ.

ಶಿರ್ತಾಡಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 24 ಗಂಟೆಗಳ ವೈದ್ಯಕೀಯ ಸೇವೆ, ಪ್ರತಿಭಟನೆ ನಡೆಸಲು ಅನುಮತಿ ಬೇಕೆಂಬ ನಿರ್ಣಯವನ್ನು ಹಿಂಪಡೆಯುವ ಬಗ್ಗೆ ಕೆಲವು ಸದಸ್ಯರಿಂದಲೇ ಭರವಸೆ ಸಿಕ್ಕ ಬಳಿಕವೇ ಸತ್ಯಾಗ್ರಹ ತ್ಯಜಿಸಿರುವುದಾಗಿ ಸುದತ್ತ ತಿಳಿಸಿದ್ದಾರೆ.

 ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಲತಾ ಹೆಗ್ಡೆಯವರ ಸದಸ್ಯತ್ಯ ಅನರ್ಹಗೊಳಿಸಲು ನ್ಯಾಯಾಲಯದ ಮೆಟ್ಟಿಲೇರುತ್ತೇನೆ. ಇದು ಅಂತ್ಯ ಅಲ್ಲ, ಜನಸೇವೆಗೆ ಎಲ್ಲಿ ಲೋಪ ಕಂಡು ಬಂದರೂ ಸತ್ಯಾಗ್ರಹ ಮಾಡಿ ಪ್ರಾಣ ತ್ಯಾಗ ಮಾಡುವುದಕ್ಕೂ ತಯಾರಿದ್ದೇನೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News