×
Ad

ನೋಟು ಅಮಾನ್ಯದ ಬಳಿಕವೂ ಸಹಕಾರಿ ಕ್ಷೇತ್ರ ವೃದ್ಧಿ : ಡಾ. ರಾಜೇಂದ್ರ ಕುಮಾರ್

Update: 2017-03-11 13:08 IST

ಮಂಗಳೂರು, ಮಾ.11: ನೋಟು ಅಮಾನ್ಯದಿಂದ ಸಹಕಾರಿ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆಯುವುದರೊಂದಿಗೆ ಸಿಬ್ಬಂದಿ ವರ್ಗದ ಅಪಾರ ಸೇವೆಯಿಂದ ನೋಟು ಅಮಾನ್ಯದ ಬಳಿಕವೂ ಸಹಕಾರಿ ಕ್ಷೇತ್ರ ವೃದ್ಧಿಸಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ‘ಉತ್ಕೃಷ್ಠ’ ಸಹಕಾರಿ ಸೌಧದಲ್ಲಿ ‘ದ.ಕ.ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮತ್ತು ಪತ್ತಿನ ಸಹಕಾರಿ ಸಂಘಗಳ ಶಾಖಾ ವ್ಯವಸ್ಥಾಪಕರು ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಶನಿವಾರ ನಡೆದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸೇವೆಗೆ ಇನ್ನೊಂದು ಹೆಸರು ಸಹಕಾರಿ ಬ್ಯಾಂಕ್ ಆಗಿದೆ. ವಾಣಿಜ್ಯ ಬ್ಯಾಂಕ್‌ಗೆ ಸರಿಸಮವಾಗಿ ಸಹಕಾರಿ ಬ್ಯಾಂಕ್ ಬೆಳೆಯಲು ಗ್ರಾಹಕರ ಜೊತೆ ಸಿಬ್ಬಂದಿ ವರ್ಗದ ಸೇವೆಯೇ ಕಾರಣವಾಗಿದೆ ಎಂದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಆರ್‌ಬಿಐ ಸೂಚನೆಯ ಹೊರತಾಗಿಯೂ ಸಹಕಾರಿ ಕ್ಷೇತ್ರವು ಯಾವುದೇ ದಂಡ, ಕನಿಷ್ಠ ಉಳಿಕೆ ಮಿತಿ ಇತ್ಯಾದಿ ನಿಯಮಗಳನ್ನು ಗ್ರಾಹಕರ ಮೇಲೆ ಹೇರುವುದಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವಂತಹ ಇನ್ನಷ್ಟು ಜನಪರ ಸೇವೆ ನೀಡಲು ಬದ್ಧವಾಗಿದೆ. ರುಪೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡಿ ಜನಸ್ನೇಹಿ ಬ್ಯಾಂಕ್ ಆಗಲು ಪ್ರಯತ್ನಿಸಲಾಗುವುದು ಎಂದರು.

ಬಿ.ಎ.ಮಹದೇವಪ್ಪ ಮತ್ತು ಪ್ರೊ. ರಾಧಾಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿದ್ದರು. ವೇದಿಕೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಸುಂದರ ಗೌಡ ಉಪಸ್ಥಿತರಿದ್ದರು.

ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಸಿದರು. ಯೂನಿಯನ್ ನಿರ್ದೇಶಕ ಎ.ಆರ್.ಶಿವರಾಮ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News