×
Ad

ಭೂಗತ ಕೇಬಲ್ ಅಳವಡಿಸಿದ ಬಳಿಕ ರಸ್ತೆಯನ್ನು ಸಹಜಸ್ಥಿತಿಗೆ ತನ್ನಿ: ಶಾಸಕ ಜೆ.ಆರ್.ಲೋಬೊ

Update: 2017-03-11 13:12 IST

ಮಂಗಳೂರು, ಮಾ.11: ನಗರದ ಕಾಂಕ್ರಿಟ್ ರಸ್ತೆಗಳನ್ನು ಭೂಗತ ಕೇಬಲ್ ಹಾಕುವ ಭರದಲ್ಲಿ ಹಾಳುಮಾಡುವುದು ಬೇಡ. ಕಾಮಗಾರಿ ಮುಗಿದ ತಕ್ಷಣವೇ ರಸ್ತೆಯನ್ನು ಸಹಜ ಸ್ಥಿತಿಗೆ ತನ್ನಿ ಎಂದು ಶಾಸಕ ಜೆ.ಆರ್.ಲೋಬೊ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ತನ್ನ ಕಚೇರಿಯಲ್ಲಿ ನಡೆದ ಮೆಸ್ಕಾಂ ಇಲಾಖಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮೆಸ್ಕಾಂ ಇಲಾಖೆ ಭೂಗತ ಕೇಬಲ್ ಅಳವಡಿಸುವುದು ಉತ್ತಮ ಕೆಲಸ. ಆದರೆ ಮಂಗಳೂರಿನ ರಸ್ತೆಗಳನ್ನು ಕೂಡಾ ಹಾಳುಗೆಡಹುದು ಸರಿಯಲ್ಲ. ಕೇಬಲ್ ಅಳವಡಿಸುವುದರ ಜೊತೆಗೆ ರಸ್ತೆಗಳ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಲೋಬೋ ಹೇಳಿದರು.

ನಗರದಲ್ಲಿ 1,800 ದಾರಿದೀಪಗಳಿವೆ. ಈ ಪೈಕಿ 350 ದೀಪಗಳಿಗೆ ಮಾತ್ರ ಸ್ವಿಚ್ ವ್ಯವಸ್ಥೆ ಇದೆ. ಉಳಿದ ಎಲ್ಲ ಸ್ವಿಚ್‌ಗಳನ್ನು ಅಳವಡಿಸಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು. ದಾರಿದೀಪಗಳ ಬಗ್ಗೆ ಆಧುನಿಕ ಕ್ರಮಗಳನ್ನು ಅಳವಡಿಸಿ ಎಲ್‌ಇಡಿ ಸಹಿತ ಬೇರೆ ವಿಧಾನಗಳನ್ನು ಅಳವಡಿಸಿ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆಯೂ ಪರಿಶೀಲಿಸಬೇಕು. ಸೂಕ್ತವಾದ ಅಂದಾಜು ಸಿದ್ಧಪಡಿಸಿ ಎಡಿಬಿ ಎರಡನೆ ಹಂತದ ವೇಳೆ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಜೆ.ಆರ್.ಲೋಬೋ ಕರೆ ನೀಡಿದರು.

ನೆಹರೂ ಮೈದಾನದಲ್ಲಿ ಇಲಾಖೆಗೆ ಅಗತ್ಯ ಭೂಮಿಯನ್ನು ಒದಗಿಸಿ ಕೊಟ್ಟಲ್ಲಿ ಅಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಗಳು ಬೇಡಿಕೆ ಮಾಡಿಸಿದಾಗ ಶಾಸಕರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಮಂಜಪ್ಪ, ಸಲಹಾ ಸಮಿತಿ ಸದಸ್ಯರಾದ ಕಮಲಾಕ್ಷ ಕುಂದರ್, ಮೋಹನ್ ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News