×
Ad

ತುಂಬೆ-ಎಎಎಂಆರ್ ಡ್ಯಾಂನಲ್ಲಿ 70 ದಿನಗಳಿಗಾಗುವಷ್ಟು ಮಾತ್ರ ನೀರು! : ಕಟ್ಟಡ ನಿರ್ಮಾಣಕ್ಕೆ ನೀರು ಬಳಸದಂತೆ ಸೂಚನೆ

Update: 2017-03-11 16:04 IST

ಮಂಗಳೂರು, ಮಾ. 11: ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರನ್ನು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ 20ರಿಂದ 25 ದಿನಗಳಿಗುವಷ್ಟು ನೀರು ಸಂಗ್ರಹವಿದ್ದರೆ, ಎಎಂಆರ್ ಸಂಸ್ಥೆಗೆ ಸೇರಿದ ಅಣೆಕಟ್ಟಿನಲ್ಲಿ ಸುಮಾರು 45 ದಿನಗಳಿಗೆ ಪೂರೈಕೆ ಮಾಡಬಹುದಾದಷ್ಟು ನೀರಿನ ಸಂಗ್ರಹವಿದೆ. ಹಾಗಿದ್ದರೂ ಕುಡಿಯುವ ನೀರಿಗೆ ಸಂಬಂಧಿಸಿ ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಮನಪಾ ಸಿದ್ಧತೆ ನಡೆಸಿದೆ ಎಂದು ನೂತನ ಮೇಯರ್ ಕವಿತಾ ಸನಿಲ್ ಜನತೆಗೆ ಆಶ್ವಾಸನೆ ನೀಡಿದ್ದಾರೆ.

ತುಂಬೆ ಕಿಂಡಿಅಣೆಕಟ್ಟು ಹಾಗೂ ಶಂಭೂರಿನ ಎಎಂಆರ್ ಅಣೆಕಟ್ಟಿಗೆ ಇಂದು ಮನಪಾದ ಹಿರಿಯ ಸದಸ್ಯರು ಹಾಗೂ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪ್ರಸ್ತುತ ಎರಡೂ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರನ್ನು ಕುಡಿಯುವುದಕ್ಕಾಗಿ ಮಾತ್ರವೇ ಬಳಸಲು ಆದ್ಯತೆ ನೀಡಲಾಗುವುದು. ಕಟ್ಟಡ ನಿರ್ಮಾಣ ಮಾಡುವವರು ತಮ್ಮ ಸ್ವಂತ ಮೂಲಗಳಿಂದ ನೀರನ್ನು ಬಳಸಬೇಕು. ಮನಪಾದಿಂದ ಪೂರೈಕೆಯಾಗುವ ಕುಡಿಯುವ ನೀರನ್ನು ಬಳಸಬಾರದು ಎಂದು ತಾಕೀತು ಮಾಡುತ್ತಿರುವುದಾಗಿ ಮೇಯರ್ ಹೇಳಿದರು.

ಇಂದು ತುಂಬೆಯ ನೂತನ ಅಣೆಕಟ್ಟಿನಲ್ಲಿ 4.5 ಮೀಟರ್ ನೀರು ಸಂಗ್ರಹವಿದ್ದು, ಸದ್ರಿ ಅಣೆಕಟ್ಟಿನಲ್ಲಿ ಐದು ಮೀಟರ್‌ವರೆಗೆ ನೀರು ಸಂಗ್ರಹಿಸಬಹುದಾಗಿದೆ. ಆದರೆ ಪ್ರಸ್ತುತ ನೇತ್ರಾವತಿ ನದಿ ನೀರಿನ ಒಳಹರಿವು ಸ್ಥಗಿತಗೊಂಡಿದೆ. ತುಂಬೆಯಿಂದ ಪ್ರತಿದಿನ 220 ಎಂಎಲ್‌ಡಿಗಿಂತಲೂ ಅಧಿಕ ನೀರನ್ನು ಉಪಯೋಗಿಲಾಗುತ್ತಿದೆ ಎಂದವರು ಹೇಳಿದರು.

ತುಂಬೆ ಅಣೆಕಟ್ಟಿನ ನದಿ ಪಾತ್ರದ ಮೇಲ್ಭಾಗದಲ್ಲಿರುವ ಶಂಭೂರಿನ ಎ.ಎಂ.ಆರ್. ಸಂಸ್ಥೆಗೆ ಸೇರಿದ ಕಿಂಡಿ ಅಣೆಕಟ್ಟು 14.25 ಎಂಸಿಎಂ(ಮಿಲಿಯನ್ ಕ್ಯೂಬಿಕ್ ಮೀಟರ್)ಗಳಾಗದ್ದು, ಇಲ್ಲಿ ಪ್ರಸ್ತುತ 6.25 ಮೀಟರ್ ಎತ್ತರದಲ್ಲಿ ನೀರು ಲಭ್ಯವಿದೆ. ಈ ಅಣೆಕಟ್ಟಿನಿಂದ ಎಂಇಸ್‌ಇಝೆಡ್, ಎಂಆರ್‌ಪಿಎಲ್‌ಗೆ ನೀರು ಪೂರೈಕೆಯಾಗುತ್ತಿದೆ. ಇಂಗುವಿಕೆ, ಆವಿಯಾಗುವ ಪ್ರಮಾಣವನ್ನೆಲ್ಲಾ ಗಣನೆಗೆ ತೆಗೆದುಕೊಂಡಲ್ಲಿ, ಸದ್ಯ ಎಎಂಆರ್ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣವು ನಗರದ ಜನತೆಗೆ 45 ದಿನಗಳಿಗೆ ಪೂರೈಸಬಹುದಾದಷ್ಟಿದೆ.

ನಿನ್ನೆ ಮನಪಾದಲ್ಲಿ ಹಿರಿಯ ಸದಸ್ಯರು ಹಾಗೂ ಅಧಿಕಾರಿಗಳ ಸಭೆಕರೆದು ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲಾಗಿದೆ. ಮಾತ್ರವಲ್ಲದೆ, ಅಣೆಕಟ್ಟಿನಿಂದ ನೀರು ಬಳಸುತ್ತಿರುವ ಸಂಸ್ಥೆಗಳ ಜತೆ ಸಭೆ ನಡೆಸಿ, ಕೈಗಾರಿಕೆ ಹಾಗೂ ಕೃಷಿ ಉದ್ದೇಶಕ್ಕೆ ನೀರಿನ ಬಳಕೆಯನ್ನು ಮಿತಿಗೊಳಿಸುವಂತೆ ಜಿಲ್ಲಾಧಿಕಾರಿಯನ್ನು ಕೋರಲಾಗಿದೆ.ನಗರದಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಮಗರದಲ್ಲಿ ಲಭ್ಯವಿರುವ ಸಾರ್ವಜನಿಕ ಬಾವಿ, ಬೋರ್‌ವೆಲ್‌ಗಳ ಸ್ಥಿತಿಗತಿ ಕುರಿತು ಸ್ಪಷ್ಟ ಮಾಹಿತಿಯನ್ನು ಸೋಮವಾರದೊಳಗೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.

ಈ ಸಂದರ್ಭ ಉಪ ಮೇಯರ್ ರಜನೀಶ್, ನಿಕಪೂಟರ್ವ ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಸದಸ್ಯ ರಾಧಾಕೃಷ್ಣ, ಆಯುಕ್ತರಾದ ಮುಹಮ್ಮದ್ ನಝೀರ್, ಹಿರಿಯ ಅಧಿಕಾರಿ ಲಿಂಗೇಗೌಡ ಮೊದಲಾವದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News