×
Ad

ಶಾಸಕ ಅಭಯಚಂದ್ರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆಗೆ ಯತ್ನ

Update: 2017-03-11 20:17 IST

ಮೂಡುಬಿದಿರೆ, ಮಾ.11: ಶಾಸಕ ಅಭಯಚಂದ್ರ ಹಾಗೂ ಅವರ ಜೊತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಾಗೂ ಭಜರಂಗಿಗಳು ಹಲ್ಲೆಗೆ ಯತ್ನಿಸಿದ ಘಟನೆ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಪಣಪಿಲ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಗುದ್ದಲಿ ಪೂಜೆಗೆ ಶಾಸಕ ಅಭಯಚಂದ್ರ ಅವರು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಪಣಪಿಲ ಕಂಬಳದ ರಸ್ತೆ ಉದ್ಘಾಟನೆ ನಡೆಸಲು ತಯಾರಿಯಲ್ಲಿದ್ದ ವೇಳೆ ಸುಮಾರು 20 ಮಂದಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಹಾಗೂ 5 ಮಂದಿ ಭಜರಂಗದಳ ಕಾರ್ಯಕರ್ತರು ಜೊತೆಗೂಡಿ ಬಂದು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾರ್ಯಕ್ರಮಕ್ಕೆ ತೊಂದರೆಯನ್ನುಂಟು ಮಾಡಿದರೆಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.

ಈ ಸಂದರ್ಭ ಶಾಸಕ ಅಭಯಚಂದ್ರ ಅವರು ಪ್ರತಿಭಟನಾಕಾರರ ಬಳಿ ಶಾಂತಿಯುತವಾಗಿ ಮಾತನಾಡಲು ಪ್ರಯತ್ನಿಸಿದರಾದರೂ ಅದನ್ನು ಲೆಕ್ಕಿಸದ ಭಜರಂಗದಳ ಕಾರ್ಯಕರ್ತರು ಮಾತಿಗಿಳಿದಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಭಜರಂಗದಳದವರ ನಡುವೆ ಹೊಕೈ ನಡೆಯಿತೆನ್ನಲಾಗಿದೆ. ಈ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದಲಿತರೊಬ್ಬರ ಮೇಲೆಯೂ ನಡೆಸಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಘಟನೆಯ ನಂತರ ಭಜರಂಗದಳದ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಸಂದರ್ಭ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಅಭಯಚಂದ್ರ ಅವರನ್ನು ರಸ್ತೆ ಉದ್ಘಾಟನೆ ಮಾಡದಂತೆ ತಡೆಯುವ ಉದ್ದೇಶದಿಂದ ಘೇರಾವ್ ಹಾಕುತ್ತಾ ಬಂದಿದ್ದರಾದರೂ, ಅವರು ತಡೆದು ಪ್ರಶ್ನಿಸಿದ ಅಭಯಚಂದ್ರ ಅವರು ನಿಮ್ಮ ಸಮಸ್ಯೆ ಏನು?ಎಂದು ಕೇಳಿದ್ದಾರೆ. ಅದಕ್ಕುತ್ತರವಾಗಿ ಮಹಿಳಾ ಕಾರ್ಯಕರ್ತರು, ಈ ಗ್ರಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ನೀವು ಅನಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದೀರಿಎಂದರು.

ಅದಕ್ಕುತ್ತರಿಸಿದ ಅಭಯಚಂದ್ರ, ನೀವು ನಿಮ್ಮ ಸಮಸ್ಯೆಗಳನ್ನು ನಮ್ಮಲ್ಲಿ ಹೇಳಿಕೊಂಡರೆ ತಿಳಿಯುತ್ತದೆ. ಒಮ್ಮಿಂದೊಮ್ಮೆಗೆ ಹೀಗೆ ವಿರೋಧಿಸಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಸಮಾಧಾನಿಸಿದ್ದಾರೆ. ಆದರೆ ಪಟ್ಟು ಬಿಡದ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ಹಾಗೂ ಭಜರಂಗದಳದ ಸದಸ್ಯರಿಂದ ಘಟನೆ ವಿಕೋಪಕ್ಕೆ ತಿರುಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಿಜೆಪಿ ಮಹಿಳಾ ಕಾರ್ಯಕರ್ತೆಯರ ತಂಡದ ನಾಯಕಿಯಾಗಿ ವಸಂತಿ ಎಂಬಾಕೆ ಹಾಗೂ ಭಜರಂಗದಳದ ಕಾರ್ಯಕರ್ತರಾದ ಸುನೀಲ್ ಪಣಪಿಲ, ಹರೀಶ್ ಪೂಜಾರಿ, ಹರೀಶ್, ದೀಕ್ಷಿತ್ ಇತರರು ಸ್ಥಳದಲ್ಲಿ ಇದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.

ಘಟನೆಯಲ್ಲಿ ದಲಿತ ಸಮುದಾಯದ ರಾಜು ಎಂಬವರ ಮೇಲೆ  ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News