ಉಡುಪಿ: ಅಡುಗೆ ಅನಿಲ ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆ
ಉಡುಪಿ, ಮಾ.11: ಅಡುಗೆ ಅನಿಲ, ಡಿಸೇಲ್, ಪೆಟ್ರೋಲ್ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಬೆಲೆಯನ್ನು ಏರಿಸುವ ಮೂಲಕ ಜನವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರಕಾರ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳ ಇಂದು ನಗರದ ಸರ್ವಿಸ್ ಬಸ್‌ನಿಲ್ದಾಣದ ಸಮೀಪದ ಕ್ಲಾಕ್‌ಟವರ್ ಎದುರು ಪ್ರತಿಭಟನೆ ನಡೆಸಿತು.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಕಡಿಮೆ ಇದ್ದರೂ, ಇಲ್ಲಿ ಅಡುಗೆ ಅನಿಲ ಅಲ್ಲದೇ ಡಿಸೇಲ್ ಮತ್ತು ಪೆಟ್ರೋಲ್ ಬೆಲೆಯನ್ನು ಹಠಾತ್ತನೇ ಏರಿಸುವ ಮೂಲಕ ನರೇಂದ್ರ ಮೋದಿ ಸರಕಾರ ಜನರಿಗೆ ದ್ರೋಹ ಬಗೆದಿದೆ. ಇದರಿಂದ ಜನರು ಪರದಾಡುವಂತಾಗಿದೆ ಎಂದು ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಹೇಳಿದರು.
ಇದರೊಂದಿಗೆ ಆಹಾರ ಉತ್ಪನ್ನ, ತರಕಾರಿ, ದವಸ-ಧಾನ್ಯ ಇತ್ಯಾದಿಗಳ ಬೆಲೆಯೂ ಜನಸಾಮಾನ್ಯರ ಕೈಗೆಟಕದ ಮಟ್ಟಕ್ಕೆ ಏರಿದ್ದು, ಇದರಿಂದ ಬಡಜನತೆ ತೀವ್ರವಾದ ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ ಎಂದವರು ದೂರಿದರು.
ಜೆಡಿಎಸ್ ಇದನ್ನು ಬಲವಾಗಿ ಖಂಡಿಸಿ, ಪ್ರತಿಭಟಿಸುವ ಮೂಲಕ ವಿರೋಧಿಸುತ್ತಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಿ ದಿನ ಉಪಯೋಗಿ ವಸ್ತುಗಳ ಬೆಲೆಯನ್ನು ಇಳಿಸಲು ಮುಂದಾಗಬೇಕೆಂದು ಪಕ್ಷ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತದೆ ಎಂದವರು ಹೇಳಿದರು.
ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷ ವಾಸುದೇವ ರಾವ್, ಪ್ರದಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಶೇಖರ್ ಕೋಟ್ಯಾನ್, ದಕ್ಷತ್ ಶೆಟ್ಟಿ, ಶಾಲಿನಿ ಕೆಂಚನೂರು, ಅಬ್ದುಲ್ ಖಾದರ್, ಪ್ರಕಾಶ ಶೆಟ್ಟಿ, ಅಬ್ದುಲ್ ರಜಾಕ್, ರಮೇಶ್ ಕುಂದಾಪುರ, ಸತೀಶ್ ಪೂಜಾರಿ, ಪ್ರದೀಪ್ ಬೈಲೂರು, ರೋಹಿತ್ ಕರಂಬಳ್ಳಿ, ಎಂ.ಎಚ್.ಮಹಮ್ಮದ್, ತಾರನಾಥ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.