ಮೋದಿ ಅಸ್ತ್ರಕ್ಕೆ ಲಭಿಸಿದ ಜನಾದೇಶ: ಡಿ.ವಿ. ಸದಾನಂದ ಗೌಡ
ಪುತ್ತೂರು, ಮಾ.11: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಲಭಿಸಿದ ಗೆಲುವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅಭಿವೃದ್ಧಿ ಪರ ಆಶಯಕ್ಕೆ ಮತ್ತು ಈ ದೇಶದಲ್ಲಿ ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ನಿರ್ಮೂಲನಗೊಳಿಸಲು ಮೋದಿ ಪ್ರಯೋಗಿಸಿದ ಅಸ್ತ್ರಕ್ಕೆ ಲಭಿಸಿದ ಜನಾದೇಶ ಎಂದು ಕೇಂದ್ರ ಸಾಂಖಿಕ್ಯ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದರು.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಅವರ ಆಡಳಿತ ಶೈಲಿ, ಬಿಜೆಪಿಯ ಸ್ವಂತಿಕೆ, ಪಕ್ಷದ್ದೇ ಆದ ವಿಚಾರಧಾರೆಗಳು, ಕಾರ್ಯಾಚರಣೆಗಳನ್ನು ಒಪ್ಪಿಕೊಂಡು ಜನತೆ ಬಿಜೆಪಿಗೆ ಮತ ನೀಡಿದ್ದಾರೆ. ಈ ವರೆಗೆ ಸಮಸ್ಯೆಯಾಗಿ ಕಾಡಿದ್ದ ರಾಜ್ಯ ಸಭೆಯಲ್ಲಿ ಈ ಫಲಿತಾಂಶದಿಂದಾಗಿ ನಮ್ಮ ಶಕ್ತಿ ಬಲವರ್ಧನೆಯಾಗಿದ್ದು, ಮುಂದೆ ಹಣಕಾಸುಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲು ಅನುಕೂಲವಾಗಲಿದೆ .2019 ರ ಲೋಕಸಭೆ ಚುನಾವಣೆಗೂ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಬಿಜೆಪಿ ಪುತ್ತೂರು ನಗರ ಮಂಡಲ ಸಮಿತಿಯ ಅಧ್ಯಕ್ಷ ಜೀವಂಧರ್ ಜೈನ್, ಮಹಿಳಾ ಮೋರ್ಚಾದ ತಾಲ್ಲೂಕು ಘಟಕದ ಅಧ್ಯಕ್ಷೆ ವಿದ್ಯಾಗೌರಿ, ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಅನೀಸ್ ಬಡೆಕ್ಕಿಲ, ರಾಜೇಶ್ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಡಿ. ಶಂಭು ಭಟ್ ಸ್ವಾಗತಿಸಿದರು. ಬಿಜೆಪಿ ನಗರ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು ವಂದಿಸಿದರು.