×
Ad

ದ. ಕೊರಿಯ ಅಧ್ಯಕ್ಷೆಯನ್ನು ವಜಾಗೊಳಿಸಿದ ನ್ಯಾಯಾಲಯ

Update: 2017-03-11 22:13 IST

ಸಿಯೋಲ್, ಮಾ. 11: ದೇಶದ ಬೃಹತ್ ಉದ್ಯಮಗಳು ಶಾಮೀಲಾಗಿರುವ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿ, ದಕ್ಷಿಣ ಕೊರಿಯದ ಸಾಂವಿಧಾನಿಕ ನ್ಯಾಯಾಲಯವು ಶುಕ್ರವಾರ ದೇಶದ ಅಧ್ಯಕ್ಷೆ ಪಾರ್ಕ್ ಗುಯನ್ ಹೈ ಅವರನ್ನು ಅಧಿಕಾರದಿಂದ ವಜಾಗೊಳಿಸಿದೆ.

ತೀರ್ಪಿನ ಬೆನ್ನಿಗೇ ಅಧ್ಯಕ್ಷೆಯ ನೂರಾರು ಬೆಂಬಲಿಗರು ನ್ಯಾಯಾಲಯದ ಹೊರಗಡೆ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಪ್ರತಿಭಟನಕಾರರು ಮೃತಪಟ್ಟರು.

ಅಧ್ಯಕ್ಷೆಯ ಆಪ್ತ ಸಹಾಯಕಿಯೊಬ್ಬರು ಅಧ್ಯಕ್ಷೆಯ ಪ್ರಭಾವವನ್ನು ಬಳಸಿ ಅನಾಮಧೇಯ ಟ್ರಸ್ಟ್‌ಗಳಿಗೆ ದೇಶದ ಉದ್ಯಮಗಳಿಂದ ನಿಧಿ ಸಂಗ್ರಹ ನಡೆಸಿದ ಪ್ರಕರಣ ಇದಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಮ್ಸಂಗ್ ಕಂಪೆನಿಯ ಮುಖ್ಯಸ್ಥರು ಈಗಾಗಲೇ ಜೈಲಿನಲ್ಲಿದ್ದಾರೆ.

ಇದೇ ಪ್ರಕರಣದಲ್ಲಿ ಸಂಸತ್ತು ಅಧ್ಯಕ್ಷೆಯನ್ನು ವಾಗ್ದಂಡನೆಗೆ ಗುರಿಪಡಿಸಿತ್ತು. ಆ ಬಳಿಕ ಅವರ ಅಧ್ಯಕ್ಷೀಯ ಅಧಿಕಾರವನ್ನು ಹಿಂದಕ್ಕೆ ಪಡೆಯಲಾಗಿತ್ತು. ಆದಾಗ್ಯೂ, ಅವರು ಅಧ್ಯಕ್ಷೀಯ ಅರಮನೆಯಲ್ಲಿ ವಾಸಿಸುವುದನ್ನು ಮುಂದುವರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News