ತುಂಬೆ-ಎಎಂಆರ್ ಡ್ಯಾಂನಲ್ಲಿ 70 ದಿನಗಳಿಗಾಗುವಷ್ಟೇ ನೀರು!
- ಕಟ್ಟಡ ನಿರ್ಮಾಣಕ್ಕೆ ನೀರು ಬಳಸದಂತೆ ಸೂಚನೆ
ಮಂಗಳೂರು, ಮಾ.11: ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರನ್ನು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ಪ್ರಸ್ತುತ 25 ದಿನಗಳಿಗಾಗುವಷ್ಟು ನೀರು ಸಂಗ್ರಹವಿದ್ದರೆ, ಎಎಂಆರ್ ಸಂಸ್ಥೆಗೆ ಸೇರಿದ ಅಣೆಕಟ್ಟಿನಲ್ಲಿ ಸುಮಾರು 45 ದಿನಗಳಿಗೆ ಪೂರೈಕೆ ಮಾಡಬಹುದಾದಷ್ಟು ನೀರಿನ ಸಂಗ್ರಹವಿದೆ ಎಂದು ನೂತನ ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ತುಂಬೆ ಕಿಂಡಿಅಣೆಕಟ್ಟು ಹಾಗೂ ಶಂಭೂರಿನ ಎಎಂಆರ್ ಅಣೆಕಟ್ಟಿಗೆ ಇಂದು ಮನಪಾದ ಹಿರಿಯ ಸದಸ್ಯರು ಹಾಗೂ ಅಕಾರಿಗಳ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯ ಕುಡಿಯುವ ನೀರಿನ ಪೂರೈಕೆಯನ್ನು ಮಿತಗೊಳಿಸುವ ಬಗ್ಗೆ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ. ಹಾಗಿದ್ದರೂ, ಕುಡಿಯುವ ನೀರಿಗೆ ಸಂಬಂಸಿ ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಮನಪಾ ಸಿದ್ಧತೆ ನಡೆಸಿದೆ ಎಂದು ನೂತನ ಮೇಯರ್ ಆಶ್ವಾಸನೆ ನೀಡಿದರು.
ಪ್ರಸ್ತುತ ಎರಡೂ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರನ್ನು ಕುಡಿಯುವುದಕ್ಕಾಗಿ ಮಾತ್ರವೇ ಬಳಸಲು ಆದ್ಯತೆ ನೀಡಲಾಗುವುದು. ಕಟ್ಟಡ ನಿರ್ಮಾಣ ಮಾಡುವವರು ತಮ್ಮ ಸ್ವಂತ ಮೂಲಗಳಿಂದ ನೀರನ್ನು ಬಳಸಬೇಕು. ಮನಪಾದಿಂದ ಪೂರೈಕೆಯಾಗುವ ಕುಡಿಯುವ ನೀರನ್ನು ಬಳಸಬಾರದು ಎಂದು ತಾಕೀತು ಮಾಡಿದರು.
ಇಂದು ತುಂಬೆಯ ನೂತನ ಅಣೆಕಟ್ಟಿನಲ್ಲಿ 4.5 ಮೀಟರ್ ನೀರು ಸಂಗ್ರಹವಿದ್ದು, ಸದರಿ ಅಣೆಕಟ್ಟಿನಲ್ಲಿ 5 ಮೀಟರ್‌ವರೆಗೆ ನೀರು ಸಂಗ್ರಹಿಸಬಹುದಾಗಿದೆ. ಆದರೆ ಪ್ರಸ್ತುತ ನೇತ್ರಾವತಿ ನದಿ ನೀರಿನ ಒಳಹರಿವು ಸ್ಥಗಿತಗೊಂಡಿದೆ. ತುಂಬೆಯಿಂದ ಪ್ರತಿದಿನ 220 ಎಂಎಲ್‌ಡಿಗಿಂತಲೂ ಅಕ ನೀರನ್ನು ಉಪಯೋಗಿಸಲಾಗುತ್ತಿದೆ ಎಂದವರು ಹೇಳಿದರು.
ತುಂಬೆ ಅಣೆಕಟ್ಟಿನ ನದಿ ಪಾತ್ರದ ಮೇಲ್ಭಾಗ ದಲ್ಲಿರುವ ಶಂಭೂರಿನ ಎ.ಎಂ.ಆರ್. ಸಂಸ್ಥೆಗೆ ಸೇರಿದ ಕಿಂಡಿ ಅಣೆಕಟ್ಟು 14.25 ಎಂಸಿಎಂ (ಮಿಲಿಯನ್ ಕ್ಯೂಬಿಕ್ ಮೀಟರ್)ಗಳಾಗಿದ್ದು, ಇಲ್ಲಿ ಪ್ರಸ್ತುತ 6.25 ಮೀಟರ್ ಎತ್ತರದಲ್ಲಿ ನೀರು ಲಭ್ಯವಿದೆ. ಈ ಅಣೆಕಟ್ಟಿನಿಂದ ಎಂಇಸ್‌ಇಝೆಡ್, ಎಂಆರ್‌ಪಿಎಲ್‌ಗೆ ನೀರು ಪೂರೈಕೆ ಯಾಗುತ್ತಿದೆ. ಇಂಗುವಿಕೆ, ಆವಿಯಾಗುವ ಪ್ರಮಾಣ ವನ್ನೆಲ್ಲಾ ಗಣನೆಗೆ ತೆಗೆದುಕೊಂಡಲ್ಲಿ, ಸದ್ಯ ಎಎಂಆರ್ ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣವು ನಗರದ ಜನತೆಗೆ 45 ದಿನಗಳಿಗೆ ಪೂರೈಸಬಹು ದಾದಷ್ಟಿದೆ. ನಿನ್ನೆ ಮನಪಾದಲ್ಲಿ ಹಿರಿಯ ಸದಸ್ಯರು ಹಾಗೂ ಅಕಾರಿಗಳ ಸಭೆಕರೆದು ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲಾಗಿದೆ. ಮಾತ್ರವಲ್ಲದೆ, ಅಣೆಕಟ್ಟಿನಿಂದ ನೀರು ಬಳಸುತ್ತಿರುವ ಸಂಸ್ಥೆಗಳ ಜತೆ ಸಭೆ ನಡೆಸಿ, ಕೈಗಾರಿಕೆ ಹಾಗೂ ಕೃಷಿ ಉದ್ದೇಶಕ್ಕೆ ನೀರಿನ ಬಳಕೆಯನ್ನು ಮಿತಿಗೊಳಿಸುವಂತೆ ಜಿಲ್ಲಾಕಾರಿಯನ್ನು ಕೋರಲಾಗಿದೆ ಎಂದರು.
- ಸೋಮವಾರದೊಳಗೆ ಬಾವಿ, ಬೋರ್‌ವೆಲ್ ಮಾಹಿತಿಗೆ ಸೂಚನೆ
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಗರದಲ್ಲಿ ಲಭ್ಯವಿರುವ ಸಾರ್ವಜನಿಕ ಬಾವಿ, ಬೋರ್‌ವೆಲ್‌ಗಳ ಸ್ಥಿತಿಗತಿ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸೋಮ ವಾರದೊಳಗೆ ಒದಗಿಸುವಂತೆ ಅಕಾರಿ ಗಳಿಗೆ ನಿರ್ದೇಶಿಸಲಾಗಿದೆ ಎಂದು ಮೇಯರ್ ತಿಳಿಸಿದರು. ಉಪ ಮೇಯರ್ ರಜನೀಶ್, ನಿಕಟ ಪೂರ್ವ ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ಸದಸ್ಯ ರಾಧಾಕೃಷ್ಣ, ಆಯುಕ್ತರಾದ ಮುಹಮ್ಮದ್ ನಝೀರ್, ಹಿರಿಯ ಅಕಾರಿ ಲಿಂಗೇಗೌಡ ಉಪಸ್ಥಿತರಿದ್ದರು.
ನೀರಿನ ಪೂರೈಕೆ ಮಿತಗೊಳಿಸುವ ಬಗ್ಗೆ ಮುಂದಿನ ವಾರ ಸಭೆ
ನೀರಿನ ಪ್ರಮಾಣ ಕುಸಿತವಾ ಗುತ್ತಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಮಿತಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ, ಸದ್ಯಕ್ಕೆ ಅಂತಹ ಚಿಂತನೆ ಇಲ್ಲ. ಮುಂದಿನ ವಾರ ಈ ಬಗ್ಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರು, ಮನಪಾದ ಹಿರಿಯ ಸದಸ್ಯರು, ಅಕಾರಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಎಂಆರ್ ಅಣೆಕಟ್ಟಿನಲ್ಲಿ ಮನಪಾ ಸಿಬ್ಬಂದಿಯಿಂದ ನಿಗಾ!
ನಗರಕ್ಕೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಕಾರಣದಿಂದ ಕೈಗಾರಿಕೆ ಗಳು ನೀರು ಎತ್ತದಂತೆ ಮತ್ತು ಅಣೆಕಟ್ಟಿನಿಂದ ನೀರು ಕೈಗಾರಿಕೆಗಳಿಗೆ ಹರಿಸುವ ಬಗ್ಗೆ ನಿಗಾ ಇರಿಸಲು ಮನಪಾದ ಅಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು. ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕೆಂದು ಮನವಿ ಮಾಡಿದ ಅವರು, ಹೂವಿನ ತೋಟ, ಕೈತೋಟ, ವಾಹನ ಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಇತರ ಕೆಲಸಗಳಿಗೆ ನೀರಿನ ಬಳಕೆಯನ್ನು ಕಡಿಮೆ ಮಾಡು ವಂತೆ ಕೋರಿದರು.
ದಿನೇ ದಿನೇ ನೀರಿನ ಮಟ್ಟದಲ್ಲಿ ಕುಸಿತ!
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಪೂರೈಕೆಯಾಗುತ್ತಿರುವ ತುಂಬೆ ಅಣೆಕಟ್ಟಿನಲ್ಲಿ ಶುಕ್ರವಾರ ನೀರಿನ ಮಟ್ಟ 4.8 ಮೀಟರ್‌ಗಳಿದ್ದರೆ, ಶನಿವಾರ (ಇಂದು) ಆ ಮಟ್ಟ 4.5ಕ್ಕೆ ಇಳಿಕೆಯಾಗಿದೆ. ನಗರಕ್ಕೆ ದಿನಕ್ಕೆ 160 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ನೀರು ಇಂಗುವಿಕೆ, ಆವಿ ಹಾಗೂ ಕೃಷಿ ಹಾಗೂ ತೋಟಗಳ ಬಳಕೆಗೆ, ಮಂಗಳೂರು ವಿವಿ, ಇನೊಓಂೀಸಿಸ್, ಏತ ನೀರಾವರಿ ಘಟಕ ಸೇರಿದಂತೆ ಒಟ್ಟು ದಿನಕ್ಕೆ ಸರಾಸರಿ 220 ಎಂಎಲ್‌ಡಿಗೂ ಅಕ ನೀರು ತುಂಬೆ ಅಣೆಕಟ್ಟಿನಿಂದ ಉಪಯೋಗವಾಗುತ್ತಿದೆ. ಅಣೆಕಟ್ಟಿಗೆ ನೀರಿನ ಒಳಹರಿವು ಸದ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಕಳೆದ ವರ್ಷ ಹಳೆ ಅಣೆಕಟ್ಟಿನಲ್ಲಿ 4 ಮೀಟರ್‌ವರೆಗೆ ಮಾತ್ರವೇ ನೀರು ಸಂಗ್ರಹ ವ್ಯವಸ್ಥೆಯಿದ್ದು, ಈ ವರ್ಷ ಅದನ್ನು ಐದು ಮೀಟರ್‌ಗಳಿಗೆ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಇದೇ ದಿನ(ಮಾ.12, 2016) ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 3.3 ಮೀಟರ್‌ಗೆ ಇಳಿಕೆಯಾಗಿತ್ತು.