ಉ.ಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ?

Update: 2017-03-11 18:17 GMT

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ಅದು ಚುನಾವಣೆಗೆ ಮುನ್ನ ತನ್ನ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯನ್ನು ಹೆಸರಿಸಿರಲಿಲ್ಲ. ಹೀಗಾಗಿ ರಾಜಕೀಯವಾಗಿ ಪ್ರತಿಷ್ಠಿತ ಈ ರಾಜ್ಯದ ನೂತನ ಅಧಿನಾಯಕ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲಿಯೂ ಗರಿಗೆದರಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬಹುದಾದ ಕೆಲವು ಸಂಭಾವ್ಯ ಅಭ್ಯರ್ಥಿಗಳಿಲ್ಲಿದ್ದಾರೆ.

ರಾಜನಾಥ ಸಿಂಗ್

ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಕಾಶಿಸಲು ಕಾರಣಕರ್ತರಲ್ಲಿ ಇವರೂ ಒಬ್ಬರು ಎನ್ನುವುದರಲ್ಲಿ ಯಾವುದೇ ಶಂಕೆಯಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಆಸಕ್ತಿ ವ್ಯಕ್ತಪಡಿಸಿಲ್ಲವಾದರೂ ಅವರ ರಾಜಕೀಯ ಅನುಭವ ಮತ್ತು ಶುದ್ಧ ವ್ಯಕ್ತಿತ್ವ ಅವರನ್ನು ಈ ಹುದ್ದೆಗೆ ಪ್ರಮುಖ ಸ್ಪರ್ಧಿಗಳಲ್ಲೊಬ್ಬರನ್ನಾಗಿಸಿದೆ.

ಮನೋಜ ಸಿನ್ಹಾ

ಮನೋಜ ಸಿನ್ಹಾ (57) ಪೂರ್ವಾಂಚಲದ ಗಾಜಿಪುರ ಸಂಸದ ಹಾಗೂ ಸಹಾಯಕ ರೈಲ್ವೆ ಸಚಿವರಾಗಿದ್ದಾರೆ. ಸಚಿವರಾಗಿ ಅವರ ಕಾರ್ಯನಿರ್ವಹಣೆಯನ್ನು ಪ್ರಧಾನಿ ಮೋದಿಯವರು ಪ್ರಶಂಸಿದ್ದಾರಾದರೂ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನೇರಬಹುದಾದ ದೊಡ್ಡ ನಾಯಕನಲ್ಲ ಎಂಬ ಭಾವನೆಯಿದೆ.

ಕೇಶವ ಪ್ರಸಾದ ಮೌರ್ಯ

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಕೇಶವ ಪ್ರಸಾದ ಮೌರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಕೆಲವು ಸಮಾನತೆಗಳಿವೆ. ಮೌರ್ಯ ಆರೆಸ್ಸೆಸ್‌ಗೆ ಸೇರಿದಾಗ ಮೋದಿಯವರಂತೆ ಚಹಾ ಮಾರಾಟಗಾರರಾಗಿದ್ದರು, ಜೊತೆಗೆ ವೃತ್ತಪತ್ರಿಕೆಗಳನ್ನೂ ಮಾರುತ್ತಿದ್ದರು. ವರ್ಷಗಳ ಬಳಿಕ ಅವರು ಮೋದಿಯವರ ಲೋಕಸಭಾ ಕ್ಷೇತ್ರವಾದ ಕಾಶಿ ಪ್ರದೇಶದ ಬಿಜೆಪಿ ಸಂಚಾಲಕರಾಗಿದ್ದರು.

ಆದರೆ ಮಾಜಿ ವಿಹಿಂಪ ಕಾರ್ಯಕರ್ತ ವೌರ್ಯ ಕ್ರಿಮಿನಲ್ ದಾಖಲೆಯನ್ನೂ ಹೊಂದಿದ್ದಾರೆ. ಕೊಲೆ,ದಂಗೆ ಮತ್ತು ಬೆಂಕಿ ಹಚ್ಚುವಿಕೆ ಸೇರಿದಂತೆ 11 ಕ್ರಿಮಿನಲ್ ಪ್ರಕರಣಗಳ ಸರದಾರನಾಗಿದ್ದಾರೆ. ಇದು ಅವರು ಮುಖ್ಯಮಂತ್ರಿಯಾಗುವ ಅವಕಾಶವನ್ನು ಮಸುಕಾಗಿಸಬಹುದು.

ದಿನೇಶ ಶರ್ಮಾ

ಬಿಜೆಪಿಯ ದಿನೇಶ ಶರ್ಮಾ ಲಕ್ನೋದ ಮೇಯರ್ ಆಗಿ ತನ್ನ ಎರಡನೆ ಅಧಿಕಾರಾವಧಿಯನ್ನು ಸದ್ಯವೇ ಪೂರ್ಣಗೊಳಿಸಲಿದ್ದಾರೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಶರ್ಮಾ(53) ನರೇಂದ್ರ ಮೋದಿಯವರ ವಿಶ್ವಾಸಿಕರಾಗಿದ್ದು, ಆರೆಸ್ಸೆಸ್ ಬೆಂಬಲವನ್ನೂ ಹೊಂದಿದ್ದಾರೆನ್ನಲಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬೆನ್ನಲ್ಲೇ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೇರಿದ್ದ ಶರ್ಮಾ ಪ್ರಧಾನಿಯವರ ತವರು ರಾಜ್ಯ ಗುಜರಾತಿನ ಉಸ್ತುವಾರಿಯೂ ಆಗಿ ನೇಮಕಗೊಂಡಿದ್ದರು. ಕಳೆದ ವರ್ಷ ದಸರಾ ಸಂದರ್ಭದಲ್ಲಿ ಲಕ್ನೊದಲ್ಲಿ ನಡೆದಿದ್ದ ಮೋದಿಯವರ ಬೃಹತ್ ರ್ಯಾಲಿಯನ್ನು ಅವರೇ ಸಂಘಟಿಸಿದ್ದರು.

ಯೋಗಿ ಆದಿತ್ಯನಾಥ

ಹಿಂದುತ್ವ ಅಭಿಯಾನದಲ್ಲಿ ಪ್ರಮುಖ ಮುಖವಾಗಿರುವ ಯೋಗಿ ಆದಿತ್ಯನಾಥ ಅವರು ಧ್ರುವೀಕರಣಕ್ಕೆ ಹೆಚ್ಚು ಒಲವು ತೋರಿಸುತ್ತಿರುವಂತಿದೆ, ಅಲ್ಲದೆ ಅವರ ಪ್ರಾದೇಶಿಕ ಆಕರ್ಷಣೆಯೂ ಸೀಮಿತವಾಗಿದೆ. ಗೋರಖಪುರದ ಸಂಸದರಾಗಿರುವ ಅವರು ಮೋದಿ-ಅಮಿತ್ ಶಾ ಜೋಡಿಯ ಕಣ್ಣಿಗೆ ಉ.ಪ್ರದೇಶದ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿ ಕಂಡುಬರುತ್ತಾರಾ..?ಗೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News