×
Ad

‘ಫಾದರ್ ಮುಲ್ಲರ್ ಸಮ್ಮೇಳನ ಸಭಾಂಗಣ’ ಲೋಕಾರ್ಪಣೆ

Update: 2017-03-12 12:09 IST

ಮಂಗಳೂರು.ಮಾ,12:ನಗರದ ಪ್ರತಿಷ್ಠಿತ ಕಂಕನಾಡಿಯ ಫಾದರ್ ಮುಲ್ಲಾರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ನಿರ್ಮಿಸಲಾಗಿರುವ ಮಂಗಳೂರಿನ ಅತ್ಯಂತ ದೊಡ್ಡ ಸಭಾಭವನವನ್ನು ಬೆಂಗಳೂರಿನ ಆರ್ಷ್ ಬಿಷಪ್ ಅತಿ.ವಂ. ಬರ್ನಾಡ್ ಮೊರಾಸ್ ರವರು ಮಂಗಳೂರು ಬಿಷಪ್ ಅತಿ.ವಂ. ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ಅಧ್ಯಕ್ಷತೆಯಲ್ಲಿ ರವಿವಾರ ಲೋಕಾರ್ಪಣೆ ಗೈದರು.

50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 38,750 ಚದರ ಅಡಿ ವಿಸ್ತಾರವಾದ ಫಾದರ್ ಮುಲ್ಲಾರ್ ಸಮ್ಮೇಳನ ಸಭಾಂಗಣದ ನಾಮ ಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅನಾವರಣಗೊಳಿಸಿದರು.

ರಾಜ್ಯದ ಹೆಮ್ಮೆಯ ಅತ್ಯುತ್ತಮ ಸಭಾಂಗಣ:

ಫಾ.ಮುಲ್ಲಾರ್ ಸಭಾಂಗಣ ಸುಸಜ್ಜಿತ ಪಾರ್ಕಿಂಗ್ ವಿಸ್ತಾರವಾದ ಸಭಾಂಗಣದೊಂದಿಗೆ ರಾಜ್ಯದಲ್ಲಿಯೇ ಅತ್ಯಂತ ಉತ್ತಮ ಸುಸಜ್ಜಿತ ಸಭಾಂಗಣದಲ್ಲಿ ಒಂದಾಗಿದೆ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾಡ್ ಮೋರಾಸ್ ಶುಭಹಾರೈಸಿದರು.

ಒಂದು ಆಲದ ಮರದ ಅಡಿಯಲ್ಲಿ 137 ವರ್ಷಗಳ ಹಿಂದೆ ಫಾ.ಆಗಸ್ಟ್‌ಸ್ ಮುಲ್ಲಾರ್ ಆರಂಭಿಸಿದ ಸಂಸ್ಥೆ ಇಂದು ಹಲವು ಶಾಖೆಗಳಾಗಿ ವಿಸ್ತಾರವಾಗಿ ಬೆಳೆದು ನಿಂತಿದೆ.ರೋಗಿಯ ರೋಗವನ್ನು ಗುಣಪಡಿಸಿ ಆತನನ್ನು ಆರೋಗ್ಯವಂತನನ್ನಾಗಿ ಮಾಡುವ ಉದ್ದೇಶದೊಂದಿಗೆ ಬೆಳೆದ ಬಂದ ಫಾದರ್ ಮುಲ್ಲಾರ್ ಆಸ್ಪತ್ರೆ ತನ್ನ ಸೇವಾ ಚಟುವಟಿಕೆಯಿಂದ ಖ್ಯಾತಿ ಪಡೆದಿದೆ. ಅದರ ಕೀರ್ತಿ ದೇಶದ ವಿದೇಶದಲ್ಲೂ ವಿಸ್ತರಿಸಲಿ ಈ ನಿಟ್ಟಿನಲ್ಲಿ ಶ್ರಮವಹಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಿಷಪ್ ಅತಿ.ವಂ.ಡಾ.ಅಲೊಶಿಯಸ್ ಪಾವ್ಲ್ ಡಿ ಸೋಜ ಹಾಗೂ ನಿರ್ದೇಶಕರಿಗೆ ಮತ್ತು ಸಂಸ್ಥೆಯ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಆರ್ಚ್ ಬಿಷಪ್ ತಿಳಿಸಿದರು.

ಮಂಗಳೂರು ಚರಿತ್ರೆಯಲ್ಲಿ ಹೊಸ ಅಧ್ಯಾಯ:

ಫಾದರ್ ಮುಲ್ಲಾರ್ ಸಂಸ್ಥೆಯ ಮೂಲಕ ನಿರ್ಮಾಣವಾದ ನೂತನ ಸುಸಜ್ಜಿತ ಬೃಹತ್ ಸಭಾಂಗಣ ಮಂಗಳೂರಿನ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಂತಾಗಿದೆ ಎಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

137ವರ್ಷಗಳ ಹಿಂದೆ ಜರ್ಮನಿಯಿಂದ ಬಂದ ಫಾ.ಮುಲ್ಲಾರ್ ಹೋಮಿಯೋಪಥಿ ಚಿಕಿತ್ಸೆಯ ಸಂಸ್ಥೆಯನ್ನು ತೆರೆದು ಸಮಾಜದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದವರು. ಫಾದರ್ ಮುಲ್ಲಾರ್ ಸಂಸ್ಥೆಯ ಆಡಳಿತವರ್ಗ ಹಾಗೂ ಸಿಬ್ಬಂದಿಗಳ ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕ ಸೇವಾ ಮನೋಭಾವದಿಂದ ಪ್ರಸಕ್ತ ಹಲವು ಸಂಸ್ಥೆಗಳೊಂದಿಗೆ ವಿಸ್ತಾರವಾಗಿ ಬೆಳೆದು ನಿಂತಿದೆ.ಮಂಗಳೂರಿನ ಸ್ಮಾರ್ಟ್ ಸಿಟಿಯ ಬೆಳವಣಿಗೆಯಲ್ಲಿ ಇದೊಂದು ಹೆಜ್ಜೆಯಾಗಿದೆ.ಇಲ್ಲಿನ ಜನರು ಉದ್ಯೋಗಕ್ಕಾಗಿ ಹೊರಗೆ ವಲಸೆ ಹೋಗುವ ಬದಲು ಇಲ್ಲಿಯೇ ಉದ್ಯೋಗ ಪಡೆಯಲು ಮುಂದಿನ ದಿನಗಳಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಡೀಮ್ಡ್ ಯೂನಿವರ್ಸಿಟಿಯಾಗಬೇಕು:

ಫಾದರ್ ಮುಲ್ಲಾರ್ ಸಂಸ್ಥೆ ಕಳೆದ 137ವರ್ಷಗಳಿಂದ ವೈದ್ಯಕೀಯ,ಶಿಕ್ಷಣ ಸೇರಿದಂತೆ ಸಮಾಜದ ವಿವಿಧ ವರ್ಗಗಳ ಸೇವೆಯನ್ನು ಮಾಡುತ್ತಾ ಬಂದಿದೆ.ಮಂಗಳೂರು ಬಿಷಪ್‌ರವರ ನೇತೃತ್ವದಲ್ಲಿ 400ಕ್ಕೂ ಅಧಿಕ ಪ್ರಾಥಮಿಕ ಶಾಲೆಗಳನ್ನು ನಡೆಸಲಾಗುತ್ತಿದೆ. ಸರಕಾರ ಮಾಡಬೇಕಾದ ಕೆಲಸವನ್ನು ದೇವರ ಕೆಲಸವೆಂದು ನಿಷ್ಠೆ,ಪ್ರಾಮಾಣಿಕತೆಯಿಂದ ಫಾದರ್ ಮುಲ್ಲಾರ್ ಸಂಸ್ಥೆ ಮಾಡಿರುವುದಕ್ಕಾಗಿ ಸರಕಾರದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಐವನ್ ಡಿ ಸೋಜ ಶ್ಲಾಘಿಸಿದರು.

ಫಾದರ್ ಮುಲ್ಲಾರ್ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾನಿಲಯವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ.ಈ ನಿಟ್ಟಿನಲ್ಲಿ ಸರಕಾರದಿಂದ ಸಹಾಯ ನೀಡಲು ಸಿದ್ದವಿರುವುದಾಗಿ ಐವನ್ ತಿಳಿಸಿದರು.

ನಗರದ ಹಾಗೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸ್ಮಾರ್ಟ್ ಸಿಟಿ ಯಾಗುತ್ತಿರುವ ನಗರಕ್ಕೆ ವಿಶಾಲ ಸಭಾಂಗಣ ಹೆಮ್ಮೆಯ ಕೊಡುಗೆಯಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ 2ರಷ್ಟಿರುವ ಕ್ರೈಸ್ತ ಸಮುದಾಯ ದೇಶದ ಶೇ 98 ಶೇ ಜನರಿಗೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ ಅದರಲ್ಲೂ ಶಿಕ್ಷಣ,ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿರುವುದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ ಎಂದರು.

ಸಮಾಂರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಬಿಷಪ್ ಹಾಗೂ ಫಾದರ್ ಮುಲ್ಲಾರ್ ಸೇವಾ ಸಂಸ್ಥೆಗಳ ಅಧ್ಯಕ್ಷ ಅತಿ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ಮಾತನಾಡುತ್ತಾ, ಫಾದರ್ ಮುಲ್ಲಾರ್ ಆರೋಗ್ಯ ಸಂಸ್ಥೆ ರೋಗಿಯ ರೋಗ ಗುಣಪಡಿಸಿ ಆತ ಸಂತೃಪ್ತಿಯಿಂದ ತೆರಳುವಂತೆ ಮಾಡುವ ಒಂದೇ ಉದ್ದೇಶದೊಂದಿಗೆ ಸೇವಾ ಮನೋಭಾವದೊಂದಿಗೆ ಸುದೀರ್ಘವಾಗಿ ಸೇವೆ ನೀಡುತ್ತಾ ಬಂದಿದೆ.ಪ್ರಸಕ್ತ ವಿಶಾಲವಾದ ಸಭಾ ಭವನದ ನಿರ್ಮಾಣ ಸಂಸ್ಥೆಯ ಬಗ್ಗೆ ಸದಾಭಿಪ್ರಾಯವನ್ನು ಹೊಂದಿರುವ ಹಿತೈಷಿಗಳಿಂದಾಗಿ ಮತ್ತು ಸಂಸ್ಥೆಯ ಸದಸ್ಯರ ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಾಗಿದೆ.ಅದಕ್ಕಾಗಿ ಸಹಾಯ ಹಸ್ತ ನೀಡಿದ ಹಾಗೂ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಫಾದರ್ ಮುಲ್ಲಾರ್ ಸಮ್ಮೇಳನ ಸಭಾಂಗಣ ಸಂಸ್ಥೆಯ ಹಾಲಿ ನಿರ್ದೇಶಕ ಫಾ.ಪ್ಯಾಟ್ರಿಕ್ ರೋಡ್ರಿಗಸ್‌ರವರ ಕನಸಿನ ಸೌದ ಎಂದರು ಮತ್ತು ಸಮಾರಂಭದಲ್ಲಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ,ಅಭಿನಂದಿಸಿದರು.

ಫಾ.ಮುಲ್ಲಾರ್ ಚಾರಿಟೇಬಲ್ ಸಂಸ್ಥೆಗಳ ಆಡಳಿತ ನಿರ್ದೇಶಕ ಫಾ.ಪ್ಯಾಟ್ರಿಕ್ ರೋಡ್ರಿಗಸ್ ಮಾತನಾಡುತ್ತಾ,ಫಾದರ್ ಮುಲ್ಲಾರ್ ಅಂತರಾಷ್ಟ್ರೀಯ ಸಮ್ಮೇಳನ ನಡೆಸಲು ಅನುಕೂಲವಿರುವ 38,750 ಚದರ ಅಡಿ ವಿಸ್ತೀರ್ಣದ ಸಮ್ಮೇಳನ ಹವಾನಿಯಂತ್ರಿತ ಸಭಾಂಗಣದಲ್ಲಿ 3.500 ಚದರ ಅಡಿಯ ವಿಸ್ತಾರ ವೇದಿಕೆ,1750 ಮಂದಿ ಅಸೀನರಾಗಲು ಸಾಧ್ಯವಿರುವ ವ್ಯವಸ್ಥೆ ಇದೆ.

ಮಲ್ಟಿ ಸ್ಟೋರಿಂಗ್ ಪಾರ್ಕಿಂಗ್ ವ್ಯವಸ್ಥೆ,5,600 ಚದರ ಅಡಿ ವಿಸ್ತೀರ್ಣದಲ್ಲಿ 500ಮಂದಿ ಆಸೀನರಾಗುವ ಮಿನಿ ಹಾಲ್,1000ಜನಕ್ಕೆ ಭೋಜನ ವ್ಯವಸ್ಥೆಯ ಹಾಲ್ 12ಲಕ್ಷ ನೀರಿನ ಸಂಗ್ರಹದ ವ್ಯವಸ್ಥೆ,ವ್ಯವಸ್ಥೆಗಳನ್ನು ಒಳಗೊಂಡ ಮಂಗಳೂರಿನಲ್ಲಿ ಅತೀ ದೊಡ್ಡ ಸಭಾಂಗಣವಾಗಿದೆ ಎಂದು ತಿಳಿಸಿದರು.

ಸಮಾರಂಭದ ವೇದಿಕೆಯಲ್ಲಿ ಫಾ.ಮುಲ್ಲಾರ್ ಚಾರಿಟೇಬಲ್ ಸಂಸ್ಥೆಗಳ ಉಪಾಧ್ಯಕ್ಷ ಮತ್ತು ವಿಕಾರ್ ಜನರಲ್ ವಂ.ಡೆನ್ನಿಸ್ ಮೋರಾಸ್ ಪ್ರಭು,ಬೋಸ್ಲಂ ಫೆರ್ನಾಂಡೀಸ್ ಮೊದಲಾದವರು ಉಪಸ್ಥಿತರಿದ್ದರು.ಫಾ.ಮುಲ್ಲಾರ್ ಚಾರಿಟೇಬಲ್ ಸಂಸ್ಥೆಗಳ ಆಡಳಿತ ನಿರ್ದೇಶಕ ಫಾ.ಪ್ಯಾಟ್ರಿಕ್ ರೋಡ್ರಿಗಸ್ ಸ್ವಾಗತಿಸಿದರು.

ಫಾ.ಮುಲ್ಲಾರ್ ಮೆಡಿಕಲ್ ಕಾಲೇಜ್, ಹಾಸ್ಪಿಟಲ್‌ನ ಆಡಳಿತ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೋ ವಂದಿಸಿದರು.ಎಫ್‌ಎಂಸಿಯ ಆಡಳಿತ ನಿರ್ದೇಶಕ ವಂ.ರುಡಾಲ್ಫ್ ರವಿ ಡೇಸಾ,ಎಫ್‌ಎಂಎಚ್‌ಎಂಸಿ ಮತ್ತು ಎಚ್‌ನ ಆಡಳಿತ ನಿರ್ದೇಶಕ ವಂ.ವಿನ್ಸೆಂಟ್ ಸಲ್ದಾನಾ,ಎಫ್‌ಎಂಎಚ್‌ಟಿಯ ಆಡಳಿತ ನಿರ್ದೇಶಕ ವಂ.ರೊಶನ್ ಕ್ರಾಸ್ತಾ, ಎಫ್‌ಎಂಎಂಸಿಎಚ್‌ನ ಸಹ ಆಡಳಿತಾಧಿಕಾರಿ ವಂ.ಅಜಿತ್ ಮಿನೇಜಸ್, ಎಫ್‌ಎಂಎಚ್‌ಎಂಸಿ ಮತ್ತು ಎಚ್‌ನ ಸಹ ಆಡಳಿತ ನಿರ್ದೇಶಕ ವಂ.ಸಿಲ್ವೇಸ್ಟರ್ ಲೋಬೊ ವಿವಿಧ ಕಾರ್ಯಕ್ರಮ ಸಂಯೋಜಿಸಿದರು.

ಡಾ.ನಿಕೋಲೆ ಪಿರೇರಾ,ಪ್ರೀತಿ ಜೈನ್ ಮತ್ತು ಸುದೀಪ್ ಫಾಯಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News