×
Ad

ಪಾರಿಕ್ಕರ್ ಗೋವಾಕ್ಕೆ ಮರಳಬೇಕೆಂದು ಜನರು ಬಯಸಿದ್ದಾರೆ: ಬಿಜೆಪಿ ಶಾಸಕ

Update: 2017-03-12 17:08 IST

 ಪಣಜಿ,ಮಾ.12: ಸಣ್ಣ ಪಕ್ಷಗಳು ಬೆಂಬಲಿಸಿದರೆ ಗೋವಾದಲ್ಲಿ ಸರಕಾರ ರಚನೆಯ ನೇತೃತ್ವವನ್ನು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ವಹಿಸಿಕೊಳ್ಳಬೇಕು ಎಂದು ನೂತನವಾಗಿ ಚುನಾಯಿತರಾಗಿರುವ ಬಿಜೆಪಿಯ ಮೂವರು ಶಾಸಕರು ರವಿವಾರ ಪ್ರತಿಪಾದಿಸಿದ್ದಾರೆ.
ಇಲ್ಲಿಯ ಪಕ್ಷದ ಕೇಂದ್ರಕಚೇರಿಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಮೈಕೆಲ್ ಲೋಬೊ (ಕಲಂಗೂಟ್) ಅವರು, ಪಾರಿಕ್ಕರ್ ಗೋವಾಕ್ಕೆ ಮರಳಬೇಕೆಂದು ಜನರು ಬಯಸಿದ್ದಾರೆ. ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಬೆಂಬಲ ನೀಡಿದರೆ ನಾವು ಸರಕಾರ ರಚಿಸುತ್ತೇವೆ ಎಂಂದರು.

ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆ ಸೃಷ್ಟಿಯಾಗಿದ್ದು, ಸದನದ 40 ಸ್ಥಾನಗಳ ಪೈಕಿ 17 ಸ್ಥಾನಗಳೊಡನೆ ಕಾಂಗ್ರೆಸ್ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 13 ಮತ್ತು ಎಂಜಿಪಿ ಹಾಗೂ ಜಿಎಫ್‌ಪಿ ತಲಾ ಮೂರು ಸ್ಥಾನಗಳನ್ನು ಗಳಿಸಿವೆ.

ಬಿಜೆಪಿ ಪಕ್ಷೇತರ ಅಭ್ಯರ್ಥಿ ಗೋವಿಂದ ಗಾವಡೆಯವರ ಬೆಂಬಲವನ್ನು ಹೊಂದಿದೆ. ಪ್ರಿಯೋಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರನ್ನು ಬಿಜೆಪಿ ಬೆಂಬಲಿಸಿತ್ತು.
ಇತರ ಇಬ್ಬರು ಪಕ್ಷೇತರರೂ ಬಿಜೆಪಿಯನ್ನು ಬೆಂಬಲಿಸಬಹುದು ಎಂದು ಲೋಬೊ ಹೇಳಿದರು.

ಪಾರಿಕ್ಕರ್ ನೇತೃತ್ವದ ಸರಕಾರವು ಉತ್ತಮ ಆಡಳಿತವನು ನೀಡಬಲ್ಲುದು. ಅವರ ಮಾರ್ಗದರ್ಶನದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಜನರು ಕಂಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ರಾಜ್ಯವು ನರಳುವುದನ್ನು ನಾವು ಬಯಸುವುದಿಲ್ಲ ಎಂದು ಸಾಂಖಳಿ ವಿಧಾನಸಭಾ ಕ್ಷೇತ್ರದಿಂದ ಪುನರಾಯ್ಕೆಗೊಂಡಿರುವ ಬಿಜೆಪಿ ಶಾಸಕ ಪ್ರಮೋದ ಸಾವಂತ್ ಹೇಳಿದರು.

 ಗೋವಾದ ಜನತೆ ಅಸ್ಪಷ್ಟ ತೀರ್ಪನ್ನು ನೀಡಿರುವುದರಿಂದ ರಾಜ್ಯದ ಏಳಿಗೆಗಾಗಿ ಕಾಂಗ್ರೆಸ್ ಹೊರತುಪಡಿಸಿ ಇತರ ಎಲ್ಲ ಪಕ್ಷಗಳು ಪಾರಿಕ್ಕರ್ ಅವರ ನೇತೃತ್ವದಲ್ಲಿ ಒಂದಾಬಹುದಾಗಿದೆ ಎಂದು ಕುಡಚಡೆ ಬಿಜೆಪಿ ಶಾಸಕ ನಿಲೇಶ್ ಕಾಬ್ರಾಲ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News