ಮಣಿಪುರದಲ್ಲಿ ಸರಕಾರ ರಚನೆಗೆ ಶಾಸಕರ ಬೆಂಬಲ ಲಭಿಸಲಿದೆ: ರಾಮ ಮಾಧವ
ಇಂಫಾಲ,ಮಾ.12: ಮಣಿಪುರದಲ್ಲಿ ಸರಕಾರ ರಚನೆಗೆ ಅಗತ್ಯವಿರುವ ಶಾಸಕರ ಬೆಂಬಲವನ್ನು ಪಕ್ಷವು ಗಳಿಸಲಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರು ರವಿವಾರ ಇಲ್ಲಿ ಹೇಳಿದರು.
ಬಿಜೆಪಿ ಈಗಾಗಲೇ ಕೆಲವರ ಬೆಂಬಲವನ್ನು ಪಡೆದುಕೊಂಡಿದೆ. ಸರಕಾರ ರಚನೆಗೆ ಅಗತ್ಯವಿರುವ ಶಾಸಕರನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಇತರರಿಂದ ಬೆಂಬಲವನ್ನು ನಿರೀಕ್ಷಿಸಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
ಚುನಾವಣಾ ಫಲಿತಾಂಶವು ಕಾಂಗ್ರೆಸ್ ಮತ್ತು ಇಬೋಬಿ ಸಿಂಗ್ ಸರಕಾರದ ವಿರುದ್ಧ ಜನತೆಯ ಸ್ಪಷ್ಟ ಆದೇಶವಾಗಿದೆ. ಮತಗಳನ್ನು ಗಳಿಸಿರುವ ಎಲ್ಲ ರಾಜಕೀಯ ಪಕ್ಷಗಳು ಮತದಾರರತ್ತ ಬದ್ಧತೆಯನ್ನು ಹೊಂದಿವೆ ಎಂದರು. ಮಣಿಪುರದಲ್ಲಿ ಸರಕಾರ ರಚನೆಗೆ ಚುನಾಯಿತ ಶಾಸಕರು ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
60 ಸದಸ್ಯಬಲದ ಮಣಿಪುರ ವಿಧಾನಸಭೆಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣ ವಾಗಿದ್ದು, ಕಾಂಗ್ರೆಸ್ 28 ಮತ್ತು ಬಿಜೆಪಿ 21 ಸ್ಥಾನಗಳನ್ನು ಗಳಿಸಿವೆ. ಎನ್‌ಪಿಎಫ್ ಮತ್ತು ಎನ್‌ಪಿಪಿ ತಲಾ ಮೂರು ಸ್ಥಾನಗಳು ಮತ್ತು ಎಲ್‌ಜೆಪಿ, ಟಿಎಂಸಿ ಮತ್ತು ಪಕ್ಷೇತರರು ತಲಾ ಒಂದು ಸ್ಥಾನ ಗೆದ್ದಿದ್ದಾರೆ.