ಸಸ್ಯಹಾರ, ಮಾಂಸಹಾರ ಸೇವನೆ ಅವರವರ ಹಕ್ಕು: ಸಚಿವ ಪ್ರಮೋದ್
ಉಡುಪಿ, ಮಾ.12: ನಾವು ನಮ್ಮ ಹಿರಿಯರು ತಿನ್ನುತ್ತಿದ್ದ ಆಹಾರ ಪದ್ಧತಿಯ ಪ್ರತಿಪಾದಕರು. ಅವರ ಪದ್ಧತಿಯನ್ನೇ ನಾವು ಇಂದು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಆದುದರಿಂದ ಯಾರು ಕೂಡ ಇದನ್ನು ತಪ್ಪು ಎಂಬುದಾಗಿ ತಿಳಿದುಕೊಳ್ಳಬಾರದು. ಸಸ್ಯಹಾರ ಅಥವಾ ಮಾಂಸಹಾರ ತಿನ್ನುವುದು ಅವರರವರ ಹಕ್ಕು ಆಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನಸೇವೆ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ ರವಿವಾರ ನಡೆದ ರಾಕೆಟ್ ಕ್ರಿಯೇಷನ್ಸ್ ಅರ್ಪಿಸುವ 'ಕೋರಿರೊಟ್ಟಿ' ತುಳು ಚಲನಚಿತ್ರದ ಮೂಹೂರ್ತ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ತುಳು ಸಿನೆಮಾದಲ್ಲಿ ಲಾಭಗಿಂತ ನಷ್ಟವೇ ಜಾಸ್ತಿ. ಲಾಭ ಇರುವಲ್ಲಿ ಹೋಗಿ ಸಿನೆಮಾ ಮಾಡುವುದು ದೊಡ್ಡ ಸಾಧನೆಯಲ್ಲ. ಕಷ್ಟದಲ್ಲೂ ಸಿನೆಮಾ ಮಾಡಲು ಹೊರಟಿರುವುದು ದೊಡ್ಡ ಸವಾಲು. ತುಳುವಿಗೆ ತುಳುವರೇ ಸಹಕಾರ ನೀಡದಿದ್ದಲ್ಲಿ ತುಳು ಭಾಷೆ ಕಲೆ ಉಳಿಯಲು ಸಾಧ್ಯವಿಲ್ಲ. ಪ್ರತಿ ಯೊಂದು ಸಿನೆಮಾವನ್ನು ತುಳುವರು ಕಡ್ಡಾಯವಾಗಿ ನೋಡುವಂತಾಗಬೇಕು ಎಂದು ಅವರು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿ, ಕ್ಯಾಮೆರಾಕ್ಕೆ ಚಾಲನೆ ನೀಡಿ ಆಶೀರ್ವಚಿ ಸಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಮಾಂಸ ಭಕ್ಷಣೆಗೆ ನಮ್ಮ ವಿರೋಧವಿಲ್ಲ ಮತ್ತು ಅದಕ್ಕೆ ಉತ್ತೇಜನ ಕೂಡ ನೀಡಲ್ಲ. ಆದರೆ ಗೋಮಾಂಸಕ್ಕೆ ಮಾತ್ರ ವಿರೋಧ. ಬ್ರಾಹ್ಮಣರು ಮಾಂಸಹಾರ ಸ್ವೀಕಾರ ಮಾಡಲೇ ಬಾರದು. ಉಳಿದವರು ಗೋಮಾಂಸ ಭಕ್ಷಣೆ ಮಾಡಬಾರದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಉದ್ಯಮಿ ಗಳಾದ ಅಮೃತ್ ಶೆಣೈ, ಹರೀಶ್ ಕಿಣಿ, ತುಳುಕೂಟದ ಉಪಾಧ್ಯಕ್ಷೆ ಯಶೋಧ ಕೇಶವ್ ಮಾತನಾಡಿದರು. ಚಿತ್ರದ ನಿರ್ದೇಶಕ, ನಾಯಕ ನಟ ರಜನೀಶ್, ನಾಯಕಿ ಅನುಶ್ರೀ, ಛಾಯಾಗ್ರಾಹಕ ಸುಬ್ಬಯ್ಯ ಕುಟ್ಟಪ್ಪ, ಸಂಗೀತ ನಿರ್ದೇಶಕ ವಿಕ್ರಮ್ ಸೆಲ್ವಂ, ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ಎಂ.ಜಿ. ನಾಗೇಂದ್ರ ಉಪಸ್ಥಿತರಿದ್ದರು. ಅನ್ಸಾರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.