×
Ad

ಉಡುಪಿ: ಜನಪ್ರತಿನಿಧಿಗಳು, ಅಧಿಕಾರಿಗಳ ಸಹಭೋಜನದಲ್ಲಿ ಕೊರಗರೇ ಇಲ್ಲ!

Update: 2017-03-12 21:07 IST

ಉಡುಪಿ, ಮಾ.12: ಅಲೆವೂರು ಗ್ರಾಪಂ ವ್ಯಾಪ್ತಿಯ ಪದವು ಸಿದ್ಧಾರ್ಥ ನಗರದ ಕೊರಗರ ಕಾಲೋನಿಯಲ್ಲಿ ರವಿವಾರ ನಡೆದ 'ಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ' ಕಾರ್ಯಕ್ರಮದಲ್ಲಿ ಕೊರಗರ ಮನೆಯಲ್ಲಿ ಸಹ ಭೋಜನ ಮಾಡಲು ಬಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನೆಯ ಒಳಗೂ ಹೋಗದೆ ಕ್ಯಾಟ್ರಿಂಗ್‌ನವರು ಮಾಡಿದ ಊಟವನ್ನು ಮನೆಯ ಅಂಗಳದಲ್ಲಿ ಹಾಕಿದ ಟೇಬಲ್ ಕುರ್ಚಿಯಲ್ಲಿ ಕುಳಿತು ತಿಂದು ಹೋದರು.

ಕೊರಗ ಸಮುದಾಯದವರಿಗೆ ವಿವಿಧ ಇಲಾಖಾ ಸೌಲಭ್ಯಗಳ ಮಾಹಿತಿ, ಕ್ರೀಡಾಕೂಟ ಹಾಗೂ ಸಹಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು. ಕಾಲೋನಿ ಸಮೀಪದ ಮೈದಾನದಲ್ಲಿ ಉದ್ಘಾಟನೆ, ಮಾಹಿತಿ ಕಾರ್ಯಕ್ರಮ, ಕ್ರೀಡಾಕೂಟ ಮತ್ತು ಸಮಾರೋಪ ಸಮಾರಂಭವನ್ನು ನಡೆಸಲಾಯಿತು.

ಇದರಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಬಳಿಕ ಇವರೆಲ್ಲ ಸಹಭೋಜನ ನಡೆಸಲು ವ್ಯವಸ್ಥೆ ಕಲ್ಪಿಸಿದ ಸಿದ್ಧಾರ್ಥ ನಗರದ ತುಕ್ರ ಕೊರಗ ಅವರ ಮನೆಗೆ ತೆರಳಿ ಒಳಗೆ ಹೋಗದೆ ಹೊರಗೆಯೇ ನಿಂತು ಮನೆಯವರನ್ನು ವಿಚಾರಿಸಿ, ಕ್ಯಾಟರಿಂಗ್‌ನವರು ಸಿದ್ಧ ಪಡಿಸಿದ ಊಟವನ್ನು ಮನೆಯ ಅಂಗಳದಲ್ಲಿ ಹಾಕಲಾದ ಟೇಬಲ್ ಕುರ್ಚಿಯಲ್ಲಿ ಕುಳಿತು ಊಟ ಮಾಡಿದರು.

ಇವರೊಂದಿಗೆ ಕೊರಗ ಸಮುದಾಯದ ಒಬ್ಬರಿಗೂ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ. ಕೇವಲ ಅಧಿಕಾರಿಗಳು, ಜನ ಪ್ರತಿನಿಧಿಗಳೇ ಊಟ ಮಾಡಿ ತೆರಳಿದರು. ಉಳಿದವರಿಗೆ ಮೈದಾನದಲ್ಲೇ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.


ಱಕೆಲ ದಿನಗಳ ಹಿಂದೆ ಗ್ರಾಪಂನವರು ಕರೆ ಮಾಡಿ 300ಮಂದಿಗೆ ಊಟದ ವ್ಯವಸ್ಥೆ ಕಲ್ಪಿಸಲು ಆಗುತ್ತದೆಯೇ ಎಂದು ಕೇಳಿದ್ದರು. ಅಷ್ಟು ಮಂದಿಗೆ ಊಟದ ವ್ಯವಸ್ಥೆ ಮಾಡಲು ಆಗುವುದಿಲ್ಲ ಎಂದು ಹೇಳಿದ್ದೇವು. ಅದಕ್ಕೆ ಅವರು ಕರ್ವಾಲಿನ ಕ್ಯಾಟರಿಂಗ್‌ನವರಿಗೆ ಊಟ ತಯಾರಿಸುವ ಜವಾ ಬ್ದಾರಿಯನ್ನು ನೀಡಿದ್ದರುೞ ಎಂದು ತುಕ್ರ ಕೊರಗರ ಮನೆಯವರು ತಿಳಿಸಿದರು.

ಎಳೆಂಟು ಮಂದಿಗೆ ಬೇಕಾದ ಊಟವನ್ನು ಮನೆಯವರೆ ಸಿದ್ಧಪಡಿಸುತ್ತಿದ್ದರು. ಆದರೆ 300 ಮಂದಿಗೆ ಬೇಕಾದ ಊಟ ತಯಾರಿಸುವುದು ಇವರಿಗೆ ಅಸಾಧ್ಯ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮನೆಯೊಳಗೆ ಬಂದು ಕೊರಗರೊಂದಿಗೆ ಕೂತು ಊಟ ಮಾಡುತ್ತಿದ್ದರೆ ಅದನ್ನು ಸಹಭೋಜನ ಎನ್ನಬಹುದಿತ್ತು. ಆದರೆ ಇವರೇ ಅಂಗಳದಲ್ಲಿ ಕುರ್ಚಿಯಲ್ಲಿ ಕುಳಿತು ಊಟ ಮಾಡಿ ಹೋದರೆ ಹೇಗೆ ಸಹಭೋಜನ ಆಗುತ್ತದೆ ಎಂಬುದು ಸ್ಥಳೀಯರ ಪ್ರಶ್ನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News