ಅನಕ್ಷರತೆ, ಮಾಹಿತಿ ಕೊರತೆಯೇ ಕೊರಗರ ಶೋಷಣೆಗೆ ಕಾರಣ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ, ಮಾ.12: ಮೂಲ ನಿವಾಸಿ ಕೊರಗರ ಶೋಷಣೆಗೆ ಅನಕ್ಷರತೆ, ಮಾಹಿತಿಯ ಕೊರತೆಯೇ ಮುಖ್ಯ ಕಾರಣವಾಗಿದೆ. ಆದುದರಿಂದ ಅಗತ್ಯ ಶಿಕ್ಷಣ ಮತ್ತು ಮಾಹಿತಿ ನೀಡುವ ಮೂಲಕ ಇತರೆ ಸಮುದಾಯಗಳಂತೆ ಕೊರಗ ಸಮುದಾಯದ ಅಭಿವೃದ್ದಿ ಕೂಡ ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಅಲೆವೂರು ಗ್ರಾಪಂ ವ್ಯಾಪ್ತಿಯ ಪದವು ಸಿದ್ಧಾರ್ಥ ನಗರದ ಕೊರಗರ ಕಾಲೋನಿಯಲ್ಲಿ ರವಿವಾರ ಗ್ರಾಪಂ ವತಿಯಿಂದ ನಡೆದ ಱಪಂಚಾಯತ್ ನಡಿಗೆ ಕೊರಗ ಸಮುದಾಯದೆಡೆಗೆ ಕಾರ್ಯಕ್ರಮದ ಸಮಾರೋಪ ಸಮಾ ರಂಭದಲ್ಲಿ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯು ಎಲ್ಲ ಕ್ಷೇತ್ರದಲ್ಲಿ ಮುಂದುವರೆದಿದ್ದು, ಜಿಲ್ಲೆಯ ಮಾವ ಸೂಚ್ಯಂಕ ವರದಿಯು ರಾಜ್ಯದಲ್ಲೆ ಪ್ರಥಮ ಸ್ಥಾನದಲ್ಲಿದೆ. ಆದರೆ ಜಿಲ್ಲೆಯ ಕೊರಗ ಸಮುದಾಯ ಮಾತ್ರ ಅಭಿವೃದ್ದಿಯಿಂದ ಹಿಂದೆ ಉಳಿದಿದ್ದಾರೆ. ಈ ಸಮುದಾಯದವರಿಗೆ ಸರಕಾರಿ ಕಾರ್ಯಕ್ರಮಗಳ ಕುರಿತು ಪೂರ್ಣ ಮಾಹಿತಿ ಮತ್ತು ಶಿಕ್ಷಣ ಸೌಲಭ್ಯ ಒದಗಿಸಬೇಕಾಗಿದೆ ಎಂದರು.
ಕೊರಗ ಸಮುದಾಯದವರು ಮುಗ್ಧರಾಗಿರುವುದರಿಂದಲೇ ಅಜಲು ಪದ್ಧತಿ ಅಸ್ಪಶ್ಯತೆ ಎಂಬುದು ಇಂದಿಗೂ ಜೀವಂತ ಇದೆ. ಅದು ಮೇಲ್ನೋಟಕ್ಕೆ ಕಾರಣದಿದ್ದರೂ ಒಳಗಿಂದಲೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೊರಗರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಇತರ ಸಮುದಾಯಗಳ ಮನ ಪರಿವರ್ತನೆ ಮಾಡಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿಯೊಬ್ಬರೂ ಜಾಬ್ ಕಾರ್ಡ್ ಮಾಡಿಸಿಕೊಂಡು ವೈಯಕ್ತಿಕ ಮತ್ತು ಸಮುದಾಯಿಕ ಅಭಿವೃದ್ದಿ ಕಾರ್ಯ ಗಳನ್ನು ಮಾಡುವಂತೆ ಹಾಗೂ ಐಟಿಡಿಪಿ ಇಲಾಖೆ ಹಾಗೂ ಇತರೆ ಇಲಾಖೆ ಗಳಲ್ಲಿ ತಮಗೆ ಇರುವ ಇರುವ ಕಾರ್ಯಕ್ರಮಗಳ ಮಾಹಿತಿ ಪಡೆದು, ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ತಾಪಂ ಸದಸ್ಯೆ ಬೇಬಿ ರಾಜೇಶ್, ನೀಲಾವರ ಮಹಿಷ ಮರ್ಧಿನಿ ದೇವಾಲಯದ ಆಡಳಿತ ಮೊಕ್ತೇಸರ ಸುಪ್ರಸಾದ್ ಶೆಟ್ಟಿ, ಪಿಡಿಓ ಬೂದ ಪೂಜಾರಿ, ಕೊರಗ ಮುಖಂಡರಾದ ರವಿ, ಲಕ್ಷ್ಮಿ , ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.