×
Ad

ನೆದರ್‌ಲ್ಯಾಂಡ್ ಪ್ರಯಾಣಕ್ಕೆ ಟರ್ಕಿ ಸಚಿವರಿಗೆ ನಿಷೇಧ

Update: 2017-03-12 21:18 IST

ಆ್ಯಮ್‌ಸ್ಟರ್‌ಡಂ, ಮಾ. 12: ಟರ್ಕಿ ವಿದೇಶ ಸಚಿವ ವೌಲೂತ್ ಕವುಸೊಗ್ಲು ರೋಟರ್‌ಡ್ಯಾಮ್‌ಗೆ ಬರುವುದನ್ನು ನೆದರ್‌ಲ್ಯಾಂಡ್ಸ್ ಶನಿವಾರ ನಿಷೇಧಿಸಿದೆ.

ಇದಕ್ಕೂ ಮೊದಲು, ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್‌ರಿಗೆ ಹೊಸದಾಗಿ ಪ್ರಬಲ ಅಧಿಕಾರಗಳನ್ನು ನೀಡುವುದರ ಪರವಾಗಿ ರೋಟರ್‌ಡ್ಯಾಮ್‌ನಲ್ಲಿ ನಡೆಯಲಿದ್ದ ಟರ್ಕಿ ನಾಗರಿಕರ ರ್ಯಾಲಿಯಲ್ಲಿ ಟರ್ಕಿ ವಿದೇಶ ಸಚಿವರು ಭಾಗವಹಿಸುವುದನ್ನು ನೆದರ್‌ಲ್ಯಾಂಡ್ಸ್ ನಿಷೇಧಿಸಿತ್ತು.

ನೂತನ ಅಧಿಕಾರಗಳನ್ನು ಅಧ್ಯಕ್ಷರಿಗೆ ನೀಡಬೇಕೇ ಬೇಡವೇ ಎಂಬ ಬಗ್ಗೆ ಮುಂದಿನ ತಿಂಗಳು ಜನಮತಗಣನೆ ನಡೆಯಲಿದೆ.

ಆದರೆ, ತಾನು ಖಂಡಿತವಾಗಿಯೂ ರೋಟರ್‌ಡ್ಯಾಮ್‌ಗೆ ಹೋಗುವುದಾಗಿ ಶನಿವಾರ ಬೆಳಗ್ಗೆ ಕವುಸೊಗ್ಲು ಹೇಳಿದ್ದರು ಹಾಗೂ ಡಚ್ ಸರಕಾರವು ತನ್ನ ದೇಶದಲ್ಲಿರುವ ಟರ್ಕಿ ನಾಗರಿಕರನ್ನು ‘ಒತ್ತೆಯಾಳು’ಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ನೆದರ್‌ಲ್ಯಾಂಡ್ ತನಗೆ ಪ್ರವೇಶ ನೀಡದಿದ್ದರೆ ಅದರ ವಿರುದ್ಧ ಕಠಿಣ ಆರ್ಥಿಕ ಮತ್ತು ರಾಜಕೀಯ ದಿಗ್ಬಂಧನೆಗಳನ್ನು ವಿಧಿಸಿವುದಾಗಿಯೂ ಕವುಸೊಗ್ಲು ಬೆದರಿಕೆ ಹಾಕಿದ್ದರು. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನೆದರ್‌ಲ್ಯಾಂಡ್ ಕಠಿಣ ನಿಲುವು ತೆಗೆದುಕೊಂಡಿದೆ.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಸವಾಲು ಮತ್ತು ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಕವುಸೊಗ್ಲು ವಿಮಾನಕ್ಕೆ ರೋಟರ್‌ಡ್ಯಾಮ್‌ನಲ್ಲಿ ಇಳಿಯಲು ಅವಕಾಶ ನೀಡಲಾಗುವುದಿಲ್ಲ ಎಂದು ನೆದರ್‌ಲ್ಯಾಂಡ್ ಹೇಳಿದೆ. ಅದೂ ಅಲ್ಲದೆ, ಬೆದರಿಕೆಯಿಂದಾಗಿ ಸಮಸ್ಯೆಗೆ ಸರ್ವಸಮ್ಮತ ಪರಿಹಾರವೊಂದನ್ನು ಕಂಡುಹಿಡಿಯುವ ಸಾಧ್ಯತೆಯೂ ಕೈತಪ್ಪಿಹೋಗಿದೆ ಎಂದಿದೆ.

ನುಸುಳಿ ಬಂದ ಸಚಿವೆ ವಾಪಸ್

ನುಸುಳಿದ ಸಚಿವೆರೋಟರ್‌ಡ್ಯಾಮ್‌ನಲ್ಲಿರುವ ಟರ್ಕಿ ಪ್ರಜೆಗಳ ರ್ಯಾಲಿಯಲ್ಲಿ ಭಾಗವಹಿಸಲು ಟರ್ಕಿ ವಿದೇಶ ಸಚಿವರಿಗೆ ನೆದರ್‌ಲ್ಯಾಂಡ್ ಅವಕಾಶ ನಿರಾಕರಿಸಿದರೂ, ಟರ್ಕಿಯ ಇನ್ನೋರ್ವ ಸಚಿವರು ರ್ಯಾಲಿಯಲ್ಲಿ ಪ್ರತ್ಯಕ್ಷರಾದ ಘಟನೆ ನಡೆದಿದೆ.

ಟರ್ಕಿಯ ಕುಟುಂಬ ಕಲ್ಯಾಣ ಸಚಿವೆ ಫಾತಿಮಾ ಬೆತುಲ್ ಸಯನ್ ಕಯ ಜರ್ಮನಿಯ ಮೂಲಕ ಕಾರಿನಲ್ಲಿ ಆಗಮಿಸಿದರು.

ಆದರೆ, ರೋಟರ್‌ಡ್ಯಾಮ್‌ನಲ್ಲಿರುವ ಟರ್ಕಿಯ ಕಾನ್ಸುಲೇಟ್ ಕಚೇರಿಯ ಎದುರು 1,000ಕ್ಕೂ ಅಧಿಕ ಜನರು ಭಾಗವಹಿಸಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡಲಿಲ್ಲ.

ಅವರನ್ನು ತಡೆದ ಪೊಲೀಸರು ಜರ್ಮನಿಯ ಗಡಿವರೆಗೆ ಅವರನ್ನು ಬಿಟ್ಟುಬಂದರು.

 ಈ ಘಟನೆಯ ಹಿನ್ನೆಲೆಯಲ್ಲಿ, ರ್ಯಾಲಿ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದರು. ಈ ಸಂದರ್ಭದಲ್ಲಿ ನೂರಾರು ಕಾರುಗಳು ರಸ್ತೆಗಳನ್ನು ಬಂದ್ ಮಾಡಿದವು.

ಕುದುರೆಗಳ ಮೇಲೆ ಆಸೀನರಾದ ಪೊಲೀಸರು ಪ್ರತಿಭಟನಕಾರರ ಗುಂಪಿನತ್ತ ಧಾವಿಸಿ ಚದುರಿಸಲು ಪ್ರಯತ್ನಿಸಿದರು ಹಾಗೂ ಜಲಫಿರಂಗಿ ಧಾರೆಯನ್ನು ಬಳಸಲಾಯಿತು.

ನಾಝಿ ಯುಗದ ಪಳೆಯುಳಿಕೆ: ಎರ್ದೊಗಾನ್

 ತನ್ನ ವಿದೇಶ ಸಚಿವರ ಪ್ರಯಾಣಕ್ಕೆ ನೆದರ್‌ಲ್ಯಾಂಡ್ ನಿಷೇಧ ವಿಧಿಸಿರುವುದು ಹಿಟ್ಲರ್‌ನ ನಾಝಿ ಯುಗದ ಪಳೆಯುಳಿಕೆಯಂತಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಶನಿವಾರ ಹೇಳಿದ್ದಾರೆ.

‘‘ಅವರು ನಾಝಿಗಳ ಪಳೆಯುಳಿಕೆಗಳು, ಅವರು ಫ್ಯಾಶಿಸ್ಟರು’’ ಎಂದು ಇಸ್ತಾಂಬುಲ್‌ನಲ್ಲಿ ಶನಿವಾರ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

‘‘ನಿಮಗೆ ಬೇಕೆನಿಸಿದಷ್ಟು ಬಾರಿ ನಮ್ಮ ವಿದೇಶ ಸಚಿವರು ನಿಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿ. ಆದರೆ, ಇನ್ನು ಮುಂದೆ ನಿಮ್ಮ ವಿಮಾನಗಳು ಟರ್ಕಿಯಲ್ಲಿ ಹೇಗೆ ಇಳಿಯುತ್ತವೆ ಎನ್ನುವುದನ್ನು ನಾವು ನೋಡುತ್ತೇವೆ’’ ಎಂದು ಎರ್ದೊಗಾನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News