ಕಾರ್ಪೊರೇಶನ್ ಬ್ಯಾಂಕ್ ಗ್ರಾಹಕ ಕೇಂದ್ರೀತ ಆಶಯ: ಗರ್ಗ್
ಉಡುಪಿ, ಮಾ.12: ಕಾರ್ಪೊರೇಶನ್ ಬ್ಯಾಂಕ್ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದರೂ ಇಂದಿಗೂ ಗ್ರಾಹಕ ಕೇಂದ್ರಿತ ಆಶಯವನ್ನು ಮುಂದು ವರಿಸಿಕೊಂಡು ಬರುತ್ತಿದೆ ಎಂದು ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಜೈಕುಮಾರ್ ಗರ್ಗ್ ಹೇಳಿದ್ದಾರೆ.
ಉಡುಪಿ ಕಡಿಯಾಳಿಯ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣ ದಲ್ಲಿ ರವಿವಾರ ಆಯೋಜಿಸಲಾದ ಕಾರ್ಪೊರೇಶನ್ ಬ್ಯಾಂಕಿನ 112ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಮೈಸ್ಟಾಂಪ್‌ನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಸ್ವದೇಶಿ ಚಿಂತನೆ ಮತ್ತು ಜಾತ್ಯತೀತ ಕಲ್ಪನೆಯ ಉದ್ದೇಶದಿಂದ ಸ್ಥಾಪನೆ ಗೊಂಡ ಈ ಬ್ಯಾಂಕ್ ಸ್ಥಾಪಕ ಹಾಜಿ ಅಬ್ದುಲ್ಲಾ ಸಾಹೇಬಹರು ಹೊಂದಿದ್ದ ಸೇವಾ ಸಂಸ್ಕೃತಿ ಆಶಯವನ್ನು ಈಗಲೂ ಉಳಿಸಿಕೊಂಡಿದೆ. ಎಲ್ಲ ರೀತಿಯ ಸೇವೆಗಳಲ್ಲಿ ಬ್ಯಾಂಕ್ ಮುಂಚೂಣಿಯಲ್ಲಿದೆ. ಇಂದಿನ ಬದಲಾಗುತ್ತಿರುವ ಪರಿಸ್ಥಿತಿ ತಕ್ಕ ರೀತಿಯಲ್ಲಿ ಹೊಸ ರೀತಿಯ ಸೇವೆಗೂ ಬ್ಯಾಂಕ್ ಸಜ್ಜಾಗಿದೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಸುನಿಲ್ ಮೆಹ್ತಾ, ಗೋಪಾಲಮುಲಿ ಭಗತ್ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಾಪಕರ ಸಂಬಂಧಿ ಕಾರ್ಕಳದ ಸಿರಾಜ್ ಅಹಮ್ಮದ್‌ರನ್ನು ಸಮ್ಮಾನಿಸಲಾಯಿತು.
ಬ್ಯಾಂಕ್ ವಲಯ ಮುಖ್ಯಸ್ಥ ಡಾ.ವಿ.ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ಚೇತನ್ ಮತ್ತು ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಜೈಕುಮಾರ್ ಗರ್ಗ್ ಬ್ಯಾಂಕಿನ ಸ್ಥಾಪಕರ ಶಾಖೆಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಪುತ್ಥಳಿಗೆ ಗೌರವ ಸಲ್ಲಿಸಿದರು.