ಗುಜರಾತ್‌ನತ್ತ ಮುಖ ಮಾಡಿದ ಆಮ್ ಆದ್ಮಿ

Update: 2017-03-13 07:00 GMT

ಹೊಸದಿಲ್ಲಿ,ಮಾ. 13: ಪಂಜಾಬ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸಿದ ಆತ್ಮವಿಶ್ವಾಸದಲ್ಲಿ ಆಮ್ ಆದ್ಮಿ ಪಾರ್ಟಿ ಈ ವರ್ಷ ಕೊನೆಯಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಿದೆ. ಗೋವಾದಲ್ಲಿ ಒಂದು ಸೀಟು ಗಳಿಸಲು ಸಾಧ್ಯವಾಗದ ಆಮ್ ಆದ್ಮಿ ಗುಜರಾತ್‌ಗೆ ಕಾಲಿಡಲು ಹಿಂಜರಿಕೆ ಸೃಷ್ಟಿಸಿಲ್ಲ. ಅಲ್ಲಿ ಸ್ಥಾನಗಳಿಸಲು ಸಾಧ್ಯವಾಗದ್ದಕ್ಕೆ ಹಲವು ಕಾರಣಗಳನ್ನು ಪಾರ್ಟಿ ಗುರುತಿಸಿದೆ. ಆದರೆ ಮೋದಿಯ ಗುಜರಾತ್‌ಗೆ ಕೇಜ್ರಿವಾಲ್ ಹೋದರೆ ಚುನಾವಣೆಯ ಚಿತ್ರ ಬದಲಾಗಬಹುದು. ರಾಜ್ಯದಲ್ಲಿರುವ ಹಲವು ಸಮಸ್ಯೆಗಳನ್ನು ಎತ್ತಿತೋರಿಸಲು ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್‌ನಿಂದ ಆಗುತ್ತಿಲ್ಲ ಎಂದು ಆಮ್ ಆದ್ಮಿ ನಾಯಕರ ಭಾವನೆಯಾಗಿದೆ.

ಪಂಜಾಬ್‌ನಲ್ಲಿ ಸರಕಾರ ರಚಿಸಲು ಸಾಧ್ಯವಾಗಬಹುದು ಮತ್ತು ಗೋವಾದಲ್ಲಿ ಉತ್ತಮ ಸ್ಥಿತಿ ಇರಬಹುದೆನ್ನುವ ಲೆಕ್ಕ ಆಮ್ ಆದ್ಮಿಯವರಲ್ಲಿತ್ತು. ಹಲವು ಮತದಾನೋತ್ತರ, ಮತದಾನಪೂರ್ವ ಸಮೀಕ್ಷೆಗಳು ಆಮ್ ಆದ್ಮಿಯ ಗೆಲುವನ್ನು ತಿಳಿಸಿದ್ದವು. ಆದರೆ ಪಂಜಾಬ್‌ನಲ್ಲಿ ಮುಖ್ಯ ಪ್ರತಿಪಕ್ಷವಾಗಲು ಆಮ್ ಅದ್ಮಿಗೆ ಸಾಧ್ಯವಾಗಿದೆ. ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ತೋರಿಸಲು ಬಲಿಷ್ಠನಾದ ಯಾವ ನಾಯಕನೂ ಆಮ್ ಆದ್ಮಿಯಲ್ಲಿರಲಿಲ್ಲ.

ಕೇಜ್ರಿವಾಲ್‌ರನ್ನು ಕೇಂದ್ರೀಕರಿಸಿ ಪ್ರಚಾರ ನಡೆದಿತ್ತು. ಹೆಚ್ಚಿನ ಅಭ್ಯರ್ಥಿಗಳು ಮತದಾರರಿಗೆ ಪರಿಚಯದವರಾಗಿರಲಿಲ್ಲ. ಪಂಜಾಬ್‌ನಲ್ಲಿ ಆಮ್ ಆದ್ಮಿಗೆ ಅಡಿಪಾಯ ಹಾಕಿದ ಸುಚ್ಚಾ ಸಿಂಗ್‌ರನ್ನು ಚುನಾವಣೆಗೆ ಸ್ವಲ್ಪ ಮೊದಲು ಪಕ್ಷದಿಂದ ಹೊರಹಾಕಿದ್ದು ಇತರ ನಾಯಕರನ್ನು ಬೆಳೆಯಲು ಕೇಜ್ರಿವಾಲ್ ಬಿಡುವುದಿಲ್ಲ ಎನ್ನುವ ಅಭಿಪ್ರಾಯವನ್ನು ಗಟ್ಟಿಗೊಳಿಸಿತು.

ಪಂಜಾಬ್‌ನಿಂದ ಹೊರಗಿನವರಿಗೆ ಆಡಳಿತ ಕೊಡಬೇಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡಿತ್ತು. ಆಮ್ ಆದ್ಮಿಗೆ ಇದು ದೊಡ್ಡ ಹೊಡೆತವಾಯಿತು. ಅದೇವೇಳೆ ಕ್ಯಾಪ್ಟನ್ ಅಮರೀಂದರ್ ಸಿಂಗ್‌ರನ್ನು ಮುಂದೆ ನಿಲ್ಲಿಸಿ ಪಂಜಾಬ್ ಅಸ್ಮಿತೆಯನ್ನು ಎತ್ತಿತೋರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿದ್ದು, ಆಮ್ ಅದ್ಮಿ ಲಭಿಸಬಹುದಾದ ಮತಗಳಿಗೆ ಅಡ್ಡಿಯಾಯತು ಎನ್ನಲಾಗಿದೆ. ಎರಡು ರಾಜ್ಯಗಳಲ್ಲಾದ ಲೋಪಗಳನ್ನು ಪರಿಶೀಲಿಸಿ ಗುಜರಾತ್‌ನಲ್ಲಿ ಚುನಾವಣಾಕಣಕ್ಕಿಳಿಯುವ ಸಿದ್ಧತೆಯಲ್ಲಿ ಆಮ್ ಆದ್ಮಿ ಪಾರ್ಟಿ ತೊಡಗಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News