×
Ad

ಕೋಸ್ಟಲ್‌ವುಡ್ ಪ್ರೀಮಿಯರ್ ಲೀಗ್ ಕ್ರಿಕೆಟ್: ಮಾ.15ರಂದು ಆಟಗಾರರ ಹರಾಜು

Update: 2017-03-13 13:39 IST

ಮಂಗಳೂರು, ಮಾ.13: ಕೋಸ್ಟಲ್‌ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯು ಕರಾವಳಿ ಚಿತ್ರರಂಗದ ಕಲಾವಿದರಿಗಾಗಿ ಮಂಗಳೂರಿನಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಆಯೋಜಿಸಿದೆ. ಆ ಪಂದ್ಯಾಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ಮಾ.15ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಸಂಘಟನೆಯ ಸ್ಥಾಪಕ ಪ್ರಕಾಶ್ ಶೆಟ್ಟಿ ಮಾಹಿತಿ ನೀಡಿ, ಎಪ್ರಿಲ್ 4ರಿಂದ 8ರವರೆಗೆ ನಡೆಯಲಿರುವ ಪಂದ್ಯಾಟವು ಐಪಿಎಲ್, ಎಂಪಿಎಲ್ ಮಾದರಿಯಲ್ಲಿ ಜರಗಲಿದೆ ಎಂದರು.

ಎಂಪಿಎಲ್‌ನ ಮುಹಮ್ಮದ್ ಸಿರಾಜುದ್ದೀನ್ ಪಂದ್ಯಾಟದ ಬಗ್ಗೆ ವಿವರ ನೀಡುತ್ತಾ, ಕರಾವಳಿ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಸೇರಿ ಎಂಟು ತಂಡಗಳು ಪಂದ್ಯಾಟದಲ್ಲಿ ಪರಸ್ಪರ ಸೆಣಸಾಡಲಿವೆ ಎಂದರು.

ತಂಡಗಳಿಗೆ ಗ್ಲಿಟ್ಝ್‌ಗ್ಲೇಡಿಯೇಟರ್ಸ್, ಎಂಡಬ್ಲು ಸ್ಟ್ರೈಕರ್ಸ್, ಕಡಂದಲೆ ಟೈಗರ್ಸ್, ಕಲ್ಕುಡೆ ಬೆಲ್ಟರ್ಸ್, ರಾಯಲ್ ರೇಂಜರ್ಸ್, ಜುಗಾರಿ ವಾರಿಯರ್ಸ್, ಬ್ರಾಂಡ್ ವಿಷನಂ ಟಸ್ಕರ್ಸ್, ಆರ್‌ಎಸ್. ಬ್ರದರ್ಸ್ ಎಂದು ಹೆಸರಿಸಲಾಗಿದೆ. ಈ ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡವೂ ತಲಾ 10 ಓವರ್‌ಗಳ ಇನ್ನಿಂಗ್ಸ್ ಒಳಗೊಂಡು 3 ಪಂದ್ಯಗಳನ್ನು ಆಡಲಿವೆ.

ಪ್ರತಿ ಗುಂಪಿನಿಂದ ಮೊದಲ ಮೂರು ಸ್ಥಾನಗಳ್ನು ಪಡೆದ ತಂಡಗಳು ನಾಕೌಟ್ ಹಂತವನ್ನು ಪ್ರವೇಶಿಸಲಿದ್ದು, ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ. 2 ಮತ್ತು ಮೂರನೆ ಸ್ಥಾನ ಪಡೆದ ತಂಡಗಳು ಕ್ವಾಟರ್ ಫೈನಲ್ ಪಂದ್ಯಾಟವಾಡಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ ಎಂದವರು ಹೇಳಿದರು.

ಐಪಿಎಲ್ ಮಾದರಿ ಆಟಗಾರರ ಹರಾಜು:

ಕಳೆದ ವರ್ಷ ಎಕ್ಕೂರು ಮೈದಾನದಲ್ಲಿ ಚಿತ್ರರಂಗದ ಮಂದಿ 4 ತಂಡಗಲಾಗಿ ಪ್ರಾಯೋಗಿಕ ಪಂದ್ಯಾಟವಾಡಿ 150 ಮಂದಿ ಆಟಗಾರರ ಪ್ರತಿಭೆಗಳನ್ನು ಗುರುತಿಸಲಾಗಿದ್ದು, ಅವರನು ಎ, ಬಿ ಹಾಗೂ ಸಿ ವಿಭಾಗಗಳಾಗಿ ಗುರುತಿಸಲಾಗಿದೆ.

ಎಂಟು ತಂಡಗಳಿಗೆ ಆಟಗಾರರನ್ನು ನೀಡುವ ಸಲುವಾಗಿ ಮಾ. 15ರಂದು ಪಾಂಡೇಶ್ವರದ ಫಾರಂ ಫಿಝಾ ಮಾಲ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಂದು ತಂಡವು ಓರ್ವ ತಾರಾ ಆಟಾಗಾರ ಹಾಗೂ ಮತ್ತೋರ್ವ ಐಕಾನ್ ಆಟಗಾರರನ್ನು ಆಯ್ದುಕೊಳ್ಳಬೇಕಾಗಿದೆ. ಪ್ರತಿ ತಂಡವು ಎ ಹಾಗೂ ಬಿ ವಿಭಾಗದಿಂದ ತಲಾ 4 ಹಾಗೂ ಸಿ ವಿಭಾಗದಿಂದ 3 ಆಟಗಾರರನ್ನು ಹರಾಜಿನ ಮೂಲಕ ಆಯ್ದುಕೊಳ್ಳಬೇಕಾಗಿದೆ.

ಪ್ರತಿಯೊಂದು ತಂಡ ಹರಾಜಿನಲ್ಲಿ ತಲಾ 3 ಲಕ್ಷ ರೂ.ಗಳನ್ನು ಉಪಯೋಗಿಸಬಹುದಾಗಿದೆ. ತಾರಾ ಆಟಗಾರರಾಗಿ ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಆಸ್ತಿಕ್ ಶೆಟ್ಟಿ, ಅನುಪ್ ಸಾಗರ್, ಸೌರಭ್ ಭಂಡಾರಿ, ಪೃಥ್ವಿ ಅಂಬರ್, ಶ್ರವಣ್ ಕದ್ರಿ ಮತ್ತು ಪ್ರಕಾಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ವಿಜೇತ ತಂಡಕ್ಕೆ ಟ್ರೋಫಿ ಜತೆ 2 ಲಕ್ಷ ರೂ. ನಗದು, ದ್ವಿತೀಯ ಸ್ಥಾನಿಗೆ ಟ್ರೋಫಿ ಹಾಗೂ 1 ಲಕ್ಷ ರೂ. ನಗದು ಬಹುಮಾನ ದೊರೆಯಲಿದೆ. ಪ್ರತಿ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಬೌಲರ್, ಉತ್ತಮ ಕ್ಷೇತ್ರ ರಕ್ಷಕ ಮೊದಲಾದ ಬಹುಮಾನದ ಜತೆಗೆ ಅಧಿಕ ಸಿಕ್ಸರ್ ಬಾರಿಸಿದ ಆಟಗಾರನಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಸಿರಾಜುದ್ದೀನ್ ವಿವರಿಸಿದರು.

ಗೋಷ್ಠಿಯಲ್ಲಿ ಕೋಸ್ಟಲ್‌ವುಡ್ ಕಲಾವಿದರು ಮತ್ತು ತಂತ್ರಜ್ಞರ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷೆ ಅಶ್ವಿನಿ ಕೋಟ್ಯಾನ್, ಕೋಶಾಧಿಕಾರಿ ವಿನಾಯಕ, ಎಂಪಿಎಲ್‌ನ ಇಮ್ತಿಯಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News